ನ್ಯೂಯಾರ್ಕ್, ಸೋಮವಾರ, 28 ಸೆಪ್ಟೆಂಬರ್ 2009( 11:37 IST )
PTI
ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ 26/11 ಭಯೋತ್ಪಾದನಾ ದಾಳಿ ನಡೆಸಿದವರ ವಿರುದ್ಧ ಅಂತಿಮ ಗಡುವಿನೊಳಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಭಾರತಕ್ಕೆ ಮತ್ತೊಮ್ಮೆ ಭರವಸೆಯನ್ನು ನೀಡಿದೆ.
ಭಾನುವಾರ ನ್ಯೂಯಾರ್ಕ್‌ನಲ್ಲಿ ಕೊನೆಗೊಂಡ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹಾಗೂ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ನಡುವೆ ನಡೆದ ಮಾತುಕತೆಯಲ್ಲಿ ಮಹತ್ವದ ಬೆಳವಣಿಗೆಯೇನೂ ಕಂಡಿಲ್ಲವಾದರೂ ಕೂಡ, ತಾನು ಮುಂಬೈ ದಾಳಿಕೋರರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಜಾರಿಕೊಂಡಿದೆ.
ಮುಂಬೈ ದಾಳಿಯ ಹಿಂದಿನ ರೂವಾರಿಗಳ ವಿರುದ್ಧ ಪಾಕಿಸ್ತಾನ ಎಫ್ಐಆರ್ ಹಾಗೂ 20ಮಂದಿಯ ವಿರುದ್ಧ ಆರೋಪಪಟ್ಟಿ ದಾಖಲಿಸಿರುವುದಾಗಿ ತಿಳಿಸಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳು ಖಚಿತಪಡಿಸಿವೆ. ಅಲ್ಲದೇ 101 ಶಂಕಿತರ ವಿರುದ್ಧವೂ ಎಫ್‌ಐಆರ್ ಹಾಕಿದ್ದು, ಅವರ ವಿರುದ್ಧವೂ ಆರೋಪಪಟ್ಟಿ ಸಲ್ಲಿಸುವ ಭರವಸೆ ನೀಡಿದೆ.
ಮುಂಬೈ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಕ್ಟೋಬರ್‌ವರೆಗೆ ಅಂತಿಮ ಗಡುವು ನೀಡಲಾಗಿದೆ. ಘಟನೆ ಕುರಿತಂತೆ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು, ಅಕ್ಟೋಬರ್ 3ರಿಂದ ವಿಚಾರಣೆ ಆರಂಭಗೊಳ್ಳಲಿದೆ ಎಂದು ಖುರೇಷಿ ತಿಳಿಸಿದ್ದಾರೆ.