ಅಡಾಲ್ಫ್ ಹಿಟ್ಲರ್ ಬಂಕರ್‌ನಲ್ಲಿ ಸಾವನ್ನಪ್ಪಿಲ್ಲ: ಸಂಶೋಧನೆ
ಲಂಡನ್, ಸೋಮವಾರ, 28 ಸೆಪ್ಟೆಂಬರ್ 2009( 18:49 IST )
ಯಹೂದಿಯರ ನರಮೇಧ ನಡೆಸಿದ್ದ ಜರ್ಮನಿಯ ಅಡಾಲ್ಫ್ ಹಿಟ್ಲರ್ ಕೊನೆಗೆ ಬಂಕರ್‌ನಲ್ಲಿ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ನಂಬಲಾಗಿತ್ತು. ಆದರೆ ಹಿಟ್ಲರ್ ಬಂಕರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತಿಲ್ಲ ಎಂಬ ನೂತನ ವಿವರನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ಬಂಕರ್‌ನಲ್ಲಿ ಗುಂಡು ಹೊಡೆದುಕೊಂಡು ಸತ್ತಿದ್ದ ಎಂದು ಹೂಳಲಾಗಿದ್ದ ಮೂಳೆಯ ಡಿಎನ್ಎ ಪರೀಕ್ಷೆ ನಡೆಸಿದ ಇತಿಹಾಸತಜ್ಞರು ಮತ್ತು ವಿಜ್ಞಾನಿಗಳು ಅದು ನಿಜಕ್ಕೂ ಮಹಿಳೆಯೊಬ್ಬಳ ಶವವೇ ಹೊರತು ಹಿಟ್ಲರ್‌ನದ್ದಲ್ಲ ಎಂಬ ವಾದ ಮಂಡಿಸಿದ್ದಾರೆ.
ಜರ್ಮನಿ ಮೇಲೆ ದಾಳಿ ನಡೆಸಿದ್ದ ರಷ್ಯಾದ ಸೈನಿಕ ಪಡೆಗಳಿಂದ ಪಾರಾಗಲು ಯತ್ನಿಸಿದ್ದ ಸಂದರ್ಭದಲ್ಲಿ ಅಡಾಲ್ಫ್ ಹಿಟ್ಲರ್ 1945 ಏಪ್ರಿಲ್ 30ರಂದು ಬಂಕರ್‌ನೊಳಗೆ ಸೈನೆಡ್ ಸೇವಿಸಿ ಬಳಿಕ ತನ್ನ ತಲೆಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿಯೇ ಇತಿಹಾಸಕಾರರು ಹೇಳಿದ್ದರು.
ಆದರೆ ದೊರೆತಿರುವ ಮೂಳೆಯ ತುಂಡೊಂದರ ಡಿಎನ್ಎ ಪರೀಕ್ಷೆ ನಡೆಸಿದ ಅಮೆರಿಕದ ವಿಜ್ಞಾನಿಗಳು, ಅದು 40ರ ಹರೆಯದ ಮಹಿಳೆಯ ಮೂಳೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 1945ರಲ್ಲಿ ಹಿಟ್ಲರ್ ವಯಸ್ಸು 56ಆಗಿತ್ತು ಎಂಬುದಾಗಿಯೂ ಹೇಳಿದ್ದಾರೆ.
ಆ ಮೂಳೆಯ ಡಿಎನ್ಎ ಪರೀಕ್ಷೆ ಆಧಾರದ ಮೇಲೆ ಹೇಳುವುದಾದರೆ ಅದು 20ರಿಂದ 40ರೊಳಗಿನ ಮಹಿಳೆಯದ್ದಾಗಿದೆ ಎಂದು ಕಾನ್ನೆಟಿಕುಟ್ ಯೂನಿವರ್ಸಸಿಟಿಯ ನಿಕ್ ಬೆಲ್ಲಾನ್‌ಟೋನಿ ತಿಳಿಸಿದ್ದಾರೆ.