ಮೆಲ್ಬೋರ್ನ್, ಮಂಗಳವಾರ, 29 ಸೆಪ್ಟೆಂಬರ್ 2009( 15:17 IST )
ಅತೀ ಅಪಾಯಕಾರಿ ಕಾಲೇಜುಗಳಲ್ಲಿ ಆಸ್ಟ್ರೇಲಿಯ ಸರ್ಕಾರದ ಶೀಘ್ರ ಲೆಕ್ಕತಪಾಸಣೆ ಕಾರ್ಯಕ್ರಮದಿಂದಾಗಿ 3 ತಿಂಗಳ ಕಾಲಾವಧಿಯಲ್ಲೇ ನಾಲ್ಕನೇ ಖಾಸಗಿ ಸಂಸ್ಥೆಯನ್ನು ಮುಚ್ಚಲಾಗುತ್ತಿದ್ದು, ಬಹುತೇಕ ಭಾರತೀಯ ವಿದ್ಯಾರ್ಥಿಗಳಿಂದ ಕೂಡಿದ 129 ವಿದೇಶಿ ವಿದ್ಯಾರ್ಥಿಗಳು ಸ್ಥಳಾಂತರಗೊಳ್ಳಲಿದ್ದಾರೆ.
ಶಿಕ್ಷಣ ಕ್ಷೇತ್ರವನ್ನು ಪರಿಶುದ್ಧಗೊಳಿಸುವ ಸರ್ಕಾರದ ಕಾರ್ಯಾಚರಣೆಯಿಂದಾಗಿ ಮೆಲ್ಬೋರ್ನ್ ಮೂಲದ, ಮ್ಯಾನೇಜ್‌ಮೆಂಟ್, ಮಲ್ಟಿಮೀಡಿಯ ಮತ್ತು ಗ್ರಾಫಿಕ್ ಆರ್ಟ್ಸ್ ಕೋರ್ಸ್‌ಗಳನ್ನು ಒದಗಿಸುವ ಸೇಂಟ್ ಜಾರ್ಜ್ ವೃತ್ತಿಪರರ ಸಂಸ್ಥೆಯನ್ನು ಮುಚ್ಚಲಾಗಿದೆ. ಕಾಲೇಜಿನ ಮುಚ್ಚುವಿಕೆಯಿಂದ ಸಂತ್ರಸ್ತರಾದ ವಿದ್ಯಾರ್ಥಿಗಳಿಗೆ ಸೂಕ್ತ ಪರ್ಯಾಯ ಕೋರ್ಸ್‌ಗಳಲ್ಲಿ ಸ್ಥಳಾವಕಾಶದ ಆಮಂತ್ರಣ ನೀಡಲಾಗಿದೆ.
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಹೈ ರಿಸ್ಕ್ ಎಂದು ಪರಿಗಣಿಸಲಾದ 41 ಶಿಕ್ಷಣ ಸಂಸ್ಥೆಗಳ ಲೆಕ್ಕತಪಾಸಣೆ ನಡೆಸುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಈ ಕಾಲೇಜನ್ನು ಮುಚ್ಚಲಾಗಿದೆ. ಮೆಲ್ಬೋರ್ನ್ ಕೇಂದ್ರ ಜಿಲ್ಲೆಯ ಫ್ಲಿಂಡರ್ಸ್ ಬೀದಿಯಲ್ಲಿ ನೆಲೆಹೊಂದಿರುವ ಸೇಂಟ್ ಜಾರ್ಜ್, 1998ರಲ್ಲಿ ಖಾಸಗಿ ಕಾಲೇಜಾಗಿ ನೋಂದಣಿಯಾಗಿತ್ತು.
ಅಗತ್ಯ ಬೋಧನೆ ಮತ್ತು ಕೋರ್ಸ್ ಗುಣಮಟ್ಟಗಳನ್ನು ಪಾಲಿಸಲು ಕಾಲೇಜು ವಿಫಲವಾಗಿದೆಯೆಂದು ಲೆಕ್ಕತಪಾಸಕರು ಕಂಡುಕೊಂಡ ಬಳಿಕ ಉದ್ಯಮದ ಒಳವಲಯದಲ್ಲಿ ಈ ಕಾಲೇಜನ್ನು 'ಕೊಳೆತ ಸೇಬು'ಎಂದು ವರ್ಣಿಸಲಾಗಿತ್ತು. ಸೇಂಟ್ ಜಾರ್ಜ್ ಮುಚ್ಚುವಿಕೆಯಿಂದ ಪೀಡಿತರಾದ ವಿದ್ಯಾರ್ಥಿಗಳಿಗೆ ಸೂಕ್ತ ಪರ್ಯಾಯ ಕೋರ್ಸ್‌ಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ಮೂಲಕ ಹೆಚ್ಚುವೆಚ್ಚವಿಲ್ಲದೇ ಅಧ್ಯಯನ ಮುಗಿಸಲು ಅವಕಾಶ ನೀಡುವ ನಿರೀಕ್ಷೆಯಿದೆ.