ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸ್ಕಾಟ್‌ಲ್ಯಾಂಡ್‌ನಲ್ಲಿ ತಾವು ಸೆರೆಸಿಕ್ಕಿದಾಗ ತಮ್ಮ ಜತೆ ಸ್ನೇಹಭಾವದಿಂದಿದ್ದ ಗ್ರಾಮಸ್ಥರಿಗೆ ತನ್ನ ಎಸ್ಟೇಟಿನ ದೊಡ್ಡ ಭಾಗವನ್ನು ಮೀಸಲಿಡಲು ಮಾಜಿ ನಾಜಿ ಎಸ್‌ಎಸ್ ಅಧಿಕಾರಿಯೊಬ್ಬರು ಯೋಜಿಸಿದ್ದಾರೆ.
ಅಬರ್ಡೀನ್‌ನ ಪ್ರೆಸ್ ಮತ್ತು ಜರ್ನಲ್ ಸುದ್ದಿಪತ್ರಿಕೆಯು ಮಾಜಿ ಕೈದಿಯನ್ನು 84 ವರ್ಷ ವಯಸ್ಸಿನ ಹೈನ್ರಿಕ್ ಸ್ಟೈನ್‌ಮೇಯರ್ ಎಂದು ಗುರುತಿಸಲಾಗಿದ್ದು, ಪ್ರಸಕ್ತ ಜರ್ಮನಿಯ ಬ್ರೆಮೆನ್ ಬಳಿಯ ಡೆಲ್ಮೆನ್‌ಹಾರ್ಸ್ಟ್‌ನಲ್ಲಿ ಜೀವಿಸಿದ್ದಾರೆ. ಕಾಮ್ರಿ ಗ್ರಾಮದ ಬಳಿಯ ಸಮರಕೈದಿಗಳ ಕಲ್ಟಿಬ್ರಾಗನ್ ಶಿಬಿರದಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ಮರಣಪತ್ರದಲ್ಲಿ ಕಾಮ್ರಿ ಗ್ರಾಮಕ್ಕೆ ಉಲ್ಲೇಖಿಸಿರುವ ಕೊಡುಗೆ ಸುಮಾರು 400,000 ಪೌಂಡ್ ಮೌಲ್ಯದ್ದೆಂದು ಭಾವಿಸಲಾಗಿದ್ದು, ಗ್ರಾಮಾಧಿಕಾರಿಗಳು ವಾಸ್ತವ ಮೊತ್ತವನ್ನು ದೃಢಪಡಿಸಲು ಅಸಮರ್ಥರಾಗಿದ್ದಾರೆ.
ಸುಮಾರು 4000 ಕೈದಿಗಳ ಜತೆ ಕಲ್ಟಿಬ್ರಾಗನ್‌ನಲ್ಲಿ ಸ್ಟೈನ್‌ಮೇಯರ್ ಅವರನ್ನು ಬಂಧಿಸಲಾಗಿತ್ತು. 1941ರಲ್ಲಿ ಪ್ಯಾರಾಚ್ಯೂಟ್‌ನಲ್ಲಿ ಇಳಿದಿದ್ದ ಹಿಟ್ಲರ್ ಡೆಪ್ಯೂಟಿ ರುಡೋಲ್ಫ್ ಹೆಸ್ ಅವರು ಕೂಡ ಆ ಗ್ರಾಮದಲ್ಲಿ ರಾತ್ರಿ ಕಳೆದಿದ್ದರು. ಸ್ಟೈನ್‌ಮೇಯರ್ ಅವರನ್ನು ಉತ್ತರ ಫ್ರಾನ್ಸ್‌ನ ಕೇನ್‌ನಲ್ಲಿ ಸೆರೆಹಿಡಿಯಲಾಗಿದ್ದು, ಕಾಮ್ರಿಯ ಶಿಬಿರಕ್ಕೆ ಅವರನ್ನು ಸಾಗಿಸಲಾಗಿತ್ತು.
ಯುದ್ಧದ ಅಂತ್ಯದಲ್ಲಿ ಅವರ ಬಿಡುಗಡೆಯಾದ ಬಳಿಕ, ಕಾಮ್ರಿ ಪಟ್ಟಣದ ಜಮೀನಿನಲ್ಲಿ ಅವರು ಕೆಲಸ ಮಾಡುತ್ತಾ, 7 ವರ್ಷಗಳ ಕೆಳಗೆ ಜರ್ಮನಿಗೆ ಹಿಂತಿರುಗುವ ತನಕ ಅಲ್ಲೇ ವಾಸವಿದ್ದರು. ತಮ್ಮ ಜೀವಮಾನದ ಉಳಿತಾಯವನ್ನು ಪಟ್ಟಣದ ಹಿರಿಯ ಸಮುದಾಯದ ಜನರಿಗೆ ನೆರವು ನೀಡಲು ಖರ್ಚು ಮಾಡುವಂತೆ ಕೂಡ ಅವರು ತಮ್ಮ ಎಸ್ಟೇಟಿನ ಕಾರ್ಯನಿರ್ವಾಹಕರಿಗೆ ತಿಳಿಸಿದ್ದಾರೆ.
ಸ್ಟೇನ್‌ಮೇಯರ್ ನೀಡುವ ಹಣದಿಂದ ಪಟ್ಟಣದಲ್ಲಿ ಬದಲಾವಣೆಯಾಗುತ್ತದೆಂದು ಪಟ್ಟಣ ಸುಧಾರಣೆಗೆ ಮುಡಿಪಾದ ದತ್ತಿಸಂಸ್ಥೆ ಕಾಮ್ರಿ ಪ್ರತಿಷ್ಠಾನಕ್ಕೆ ಕೆಲಸ ಮಾಡುವ ಜಾನ್ ಕಾರ್ಮಿಚಾಲ್ ತಿಳಿಸಿದ್ದಾರೆ. ಸುಮಾರು 60 ವರ್ಷಗಳ ಹಿಂದೆ ಸಮರಕೈದಿಯೊಬ್ಬರಿಗೆ ಗ್ರಾಮಸ್ಥರು ತೋರಿದ ದಯೆಯು ಇಷ್ಟು ವರ್ಷಗಳ ಮೇಲೆ ಪರಿಣಾಮಬೀರಿದ್ದು ಅಚ್ಚರಿಯ ವಿಷಯವೆಂದು ಕಾರ್ಮಿಚೆಲ್ ಹೇಳಿದ್ದಾರೆ.