ತಾಲಿಬಾನ್ ಜತೆ ಸರ್ಕಾರದ ಗೋಪ್ಯ ಒಪ್ಪಂದವು ತಿರುಗೇಟು ನೀಡಿತೆಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ. ಮುಷರಫ್ ಆಡಳಿತವನ್ನು ತಾಲಿಬಾನ್ ದಾರಿತಪ್ಪಿಸಿತೆಂಬುದನ್ನು ಮುಷರಫ್ ಹೇಳಿಕೆ ಉಲ್ಲೇಖಿಸಿ ಡೇಲಿ ಟೈಮ್ಸ್ ವರದಿ ಮಾಡಿದೆ.
ಒಂದು ಬದಿಯಲ್ಲಿ ಶರಿಯತ್ ಕಾನೂನಿನ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ತಾಲಿಬಾನ್ ಪಾಕಿಸ್ತಾನ ಸರ್ಕಾರದ ಜತೆ ಮಾತುಕತೆ ನಡೆಸಿತು. ಇನ್ನೊಂದು ಬದಿಯಲ್ಲಿ, ತಾಲಿಬಾನಿಗಳು ದೇಶದ ಸಂವಿಧಾನವನ್ನು ಇಸ್ಲಾಮಿಕ್ ವಿರೋಧಿಯೆಂದು ಟೀಕಿಸಿದರು. ಇದಕ್ಕೆ ಮುಂಚೆ ಒಂದು ಕಡೆ ತಾಲಿಬಾನಿಗಳಿಗೆ ಕುಮ್ಮಕ್ಕು ನೀಡುತ್ತಾ, ಇನ್ನೊಂದು ಕಡೆ ತಾಲಿಬಾನ್ ವಿರುದ್ಧ ಹೋರಾಟಕ್ಕೆ ಅಮೆರಿಕದ ಆರ್ಥಿಕನೆರವನ್ನು ಪಡೆದು ಇಬ್ಬಗೆಯ ಆಟವಾಡಿದ್ದಾರೆಂಬ ಆರೋಪವನ್ನು ಮುಷರಫ್ ಖಡಾಖಂಡಿತವಾಗಿ ನಿರಾಕರಿಸಿದ್ದರು.
'ತಾವು ದ್ವಂದ್ವ ನೀತಿ ಅನುಸರಿಸಿಲ್ಲ. ಪಾಕಿಸ್ತಾನ ಸೇನೆಯನ್ನು, ಐಎಸ್‌ಐಎನ್ನು ದುರ್ಬಲಗೊಳಿಸುವ ವಿರುದ್ಧ ದೊಡ್ಡ ಸಂಚು ರೂಪಿಸಲಾಗುತ್ತಿದೆ' ಎಂದು ಮುಷರಫ್ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತ ಡೇವಿಡ್ ಸಾಂಗರ್ ಅವರಿಗೆ ತಿಳಿಸಿದ್ದರು. ಏತನ್ಮಧ್ಯೆ, ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಹತ್ಯೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಹಾಜರಾಗಲು ವಿಫಲರಾದ ಮುಷರಫ್ ಮತ್ತು ಇನ್ನೂ 9 ಮಂದಿಗೆ ಪಾಕಿಸ್ತಾನ ಕೋರ್ಟ್ ನೋಟಿಸ್ ಜಾರಿ ಮಾಡಿದೆ.