ದೇಶದ ಪಶ್ಚಿಮದಲ್ಲಿ ಭಯೋತ್ಪಾದಕರ ಕಾರುಬಾಂಬ್ ದಾಳಿಯಿಂದ ಆಫ್ಘಾನಿಸ್ತಾನದ ಇಂಧನ ಸಚಿವ ಮೊಹಮದ್ ಇಸ್ಮೈಲ್ ಖಾನ್ ಪಾರಾಗಿದ್ದು, ಕನಿಷ್ಠ ನಾಲ್ವರು ನಾಗರಿಕರು ಸತ್ತಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ಘಾನಿಸ್ತಾನದ ಸಂಸ್ಕೃತಿ ಕೇಂದ್ರವಾದ ಹೆರಾಟ್‌ನಲ್ಲಿ ಇಸ್ಮೈಲ್ ಖಾನ್ ಅವರ ಬೆಂಗಾವಲು ವಾಹನ ಹಾದುಹೋಗುತ್ತಿದ್ದಾಗ ಬಾಂಬ್ ಸ್ಫೋಟಿಸಿ, ವಾಹನಗಳ ಅವಶೇಷಗಳು ಸಾಲುಮರಗಳ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವೆಂದು ಸ್ಥಳೀಯ ಪೊಲೀಸ್ ವಕ್ತಾರ ಅಬ್ದುಲ್ ರಾಫ್ ಅಹ್ಮದಿ ತಿಳಿಸಿದರು. ಮಹಿಳೆ ಮತ್ತು ಮಗು ಸೇರಿದಂತೆ ನಾಲ್ವರು ದುರ್ಘಟನೆಯಲ್ಲಿ ಸತ್ತಿದ್ದು, 17 ಮಂದಿ ಗಾಯಗೊಂಡಿದ್ದಾರೆಂದು ಅಹ್ಮದಿ ತಿಳಿಸಿದ್ದಾರೆ.
ಸಚಿವರ ಮೂವರು ಅಂಗರಕ್ಷಕರು ಗಾಯಾಳುಗಳಲ್ಲಿ ಸೇರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋವಿಯಟ್ ಆಕ್ರಮಣದ ಸಂದರ್ಭದಲ್ಲಿ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ಸಚಿವರು 1996-2001ರ ತಾಲಿಬಾನ್ ಅಧಿಕಾರಾವಧಿಯಲ್ಲಿ ಸೆರೆಯಲ್ಲಿದ್ದರು.ಇಸ್ಮೈಲ್ ಖಾನ್ ತಮ್ಮ ದಾಳಿಗೆ ಗುರಿಮಾಡಲಾಗಿತ್ತೆಂದು ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ಬಂಡುಕೋರರ ಪರವಾಗಿ ದಾಳಿಯ ಹೊಣೆಯನ್ನು ಹೊತ್ತಿದ್ದಾನೆ.