ಇಸ್ಲಾಮಾಬಾದ್, ಬುಧವಾರ, 30 ಸೆಪ್ಟೆಂಬರ್ 2009( 09:41 IST )
ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆ ಹಿಂದೆ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಕೈವಾಡವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರಿಗೆ ಕೋರ್ಟ್ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಿದೆ.
ನವೆಂಬರ್ 2ನೇ ವಾರದೊಳಗೆ ಕೋರ್ಟ್ ಮುಂದೆ ಹಾಜರಾಗುವಂತೆ ಮುಷರ್ರಫ್ ಹಾಗೂ ಇತರರಿಗೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಲಾಹೋರ್ ಹೈಕೋರ್ಟ್‌ನ ರಾವಲ್ಪಿಂಡಿ ಪೀಠ ಆದೇಶಿಸಿದೆ.
ಸದ್ಯ ವಿದೇಶ ಪ್ರವಾಸಗಳಲ್ಲಿರುವ ಮುಷರ್ರಫ್ ವಿರುದ್ಧ ಜಾರಿಗೊಳಿಸಲಾಗುತ್ತಿರುವ 2ನೇ ನೋಟಿಸ್ ಇದಾಗಿದೆ. ತಿಂಗಳ ಹಿಂದಷ್ಟೇ ಕೋರ್ಟ್‌ಗೆ ಹಾಜರಾಗುವಂತೆ ಹೈಕೋರ್ಟ್ ಹೇಳಿತ್ತು. ಇದಲ್ಲದೆ, ಬಲೂಚಿ ನಾಯಕ ನವಾಬ್ ಅಕ್ಬರ್ ಭುಗ್ತಿ ಹತ್ಯೆ ಪ್ರಕರಣದಲ್ಲೂ ಬಲೂಚಿಸ್ತಾನ ಹೈಕೋರ್ಟ್ ಮುಷರ್ರಫ್‌ಗೆ ಸಮನ್ಸ್ ಜಾರಿಗೊಳಿಸಿದೆ.
ಭುಟ್ಟೋ ಹತ್ಯೆ ಪ್ರಕರಣದಲ್ಲಿ ಬೆನಜೀರ್ ಅವರ ಆಪ್ತ ಚೌಧರಿ ಮುಹಮದ್ ಅಸ್ಲಾಂ ಅವರು ಮುಷರ್ರಫ್ ವಿರುದ್ಧ ದೂರು ನೀಡಿದ್ದರು. ಮುಷ್ ಸೇರಿದಂತೆ ಅನೇಕ ರಾಜಕೀಯ ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿದ್ದರು.