ಪೂರ್ವ ನೇಪಾಳದ ಸುನ್ಸಾರಿ ಜಿಲ್ಲೆಯಲ್ಲಿ ಚರ್ಚಿನ ಕಟ್ಟಡ ಕುಸಿದುಬಿದ್ದಿದ್ದರಿಂದ ಭಾರತೀಯ ಪೌರನೊಬ್ಬ ಸೇರಿದಂತೆ ಕನಿಷ್ಠ 24 ಜನರು ಸತ್ತಿದ್ದಾರೆ ಮತ್ತು 63 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸುಮಾರು 1500 ಜನರು ಕಲೆತಿದ್ದ ಧಾರ್ಮಿಕ ಸಮಾವೇಶದ ಸಂದರ್ಭದಲ್ಲಿ ಧರಾನ್‌ನ ತಾತ್ಕಾಲಿಕ ಮೂರು ಮಹಡಿಗಳ ಕಟ್ಟಡದ ಮೇಲ್ಛಾವಣಿ ಮಂಗಳವಾರ ರಾತ್ರಿ ಕುಸಿದುಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟ 24 ಜನರಲ್ಲಿ 17 ಮಂದಿ ಮಹಿಳೆಯರು ಮತ್ತು ನಾಲ್ವರು ಮಕ್ಕಳೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಭಾರತೀಯನನ್ನು 35 ವರ್ಷ ವಯಸ್ಸಿನ ನೀರು ರೈ ಎಂದು ಗುರುತಿಸಲಾಗಿದೆ.
ಭಕ್ತರು ನಿದ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಬಿದಿರಿನಿಂದ ನಿರ್ಮಿಸಿದ ಕಟ್ಟಡದ ಗೋಡೆ ಕುಸಿಯಿತು. ಬಹುತೇಕ ಮಂದಿ ದುರ್ದೈವಿಗಳು ಕಟ್ಟಡದ ನೆಲಮಹಡಿಯಲ್ಲಿದ್ದರೆಂದು ಪೊಲೀಸರು ತಿಳಿಸಿದ್ದಾರೆ.