ಇಂಡೊನೇಶಿಯ ಸುಮಾತ್ರ ದ್ವೀಪದಲ್ಲಿ 7.9 ತೀವ್ರತೆಯ ಪ್ರಬಲ ಭೂಕಂಪ ಬುಧವಾರ ಅಪ್ಪಳಿಸಿದ್ದು, ಕಟ್ಟಡಗಳು ಉರುಳಿಬಿದ್ದಿವೆ ಮತ್ತು ಪಡಾಂಗ್ ನಗರದಲ್ಲಿ ಬೆಂಕಿಯ ಜ್ವಾಲೆ ಆವರಿಸಿದ್ದು, ಭಯಭೀತ ನಿವಾಸಿಗಳು ಕಂಪನ ಸಂಭವಿಸಿದ ಕ್ಷಣವೇ ಬೀದಿಗಳಿಗೆ ಓಡಿದ್ದಾರೆ.
ಪಶ್ಚಿಮ ಸುಮಾತ್ರ ಪ್ರಾಂತ್ಯದ ಪಡಾಂಗ್ ನಗರದ ವಾಯವ್ಯಕ್ಕೆ 53 ಕಿಮೀ ದೂರದ ಸಮುದ್ರಗರ್ಭದಲ್ಲಿ 87 ಕಿಮೀ(53 ಮೈಲು) ಆಳದಲ್ಲಿ ಸಂಜೆ 5.16 ಕ್ಕೆ(1016 ಜಿಎಂಟಿ) ಭೂಕಂಪ ಅಪ್ಪಳಿಸಿದೆಯೆಂದು ಅಮೆರಿಕದ ಬೌಗೋಳಿಕ ಸಮೀಕ್ಷೆ ತಿಳಿಸಿದೆ. ಭೂಕಂಪದ ಹಿನ್ನೆಲೆಯಲ್ಲಿ ಯಾವುದೇ ಸುನಾಮಿ ಮುನ್ನಚ್ಚರಿಕೆಯನ್ನು ನೀಡಲಾಗಿಲ್ಲ.
ಭೂಕಂಪದ ಕೇಂದ್ರಬಿಂದು ತೀರಕ್ಕೆ 50 ಕಿಮೀ ದೂರದ ಪಡಾಂಗ್ ನಗರದ ಬಳಿಯಿತ್ತು. ದಕ್ಷಿಣ ಪೆಸಿಫಿಕ್‌ನಲ್ಲಿ ಸಮುದ್ರಗರ್ಭದ ಭೂಕಂಪದಿಂದ ಸುನಾಮಿ ರಕ್ಕಸ ಅಲೆಗಳೆದ್ದು ದ್ವೀಪಗಳಲ್ಲಿದ್ದ 100 ಜನರು ಹತರಾದ ಕೆಲವೇ ಗಂಟೆಗಳಲ್ಲಿ ಇಂಡೊನೇಶಿಯದಲ್ಲಿ ಭೂಕಂಪ ಅಪ್ಪಳಿಸಿದೆ.
ಇಂಡೊನೇಶಿಯ ಪೆಸಿಫಿಕ್ ಬೆಂಕಿಯ ಉಂಗುರದ ಮೇಲೆ ಕುಳಿತಿದ್ದು, ಖಂಡಾಂತರ ಪ್ಲೇಟ್‌ಗಳ ಘರ್ಷಣೆಯಿಂದ ಜ್ವಾಲಾಮುಖಿ ಮತ್ತು ಕಂಪನದ ಚಟುವಟಿಕೆಗಳಾಗುತ್ತಿವೆ.