ಇಂಡೊನೇಶಿಯ ಸುಮಾತ್ರ ದ್ವೀಪದಲ್ಲಿ ಬುಧವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿರಾರು ಜನರು ಮೃತಪಟ್ಟಿರುವರೆಂದು ಶಂಕಿಸಿರುವುದಾಗಿ ಆರೋಗ್ಯ ಸಚಿವಾಲಯದ ಬಿಕ್ಕಟ್ಟು ನಿವಾರಣೆ ಕೇಂದ್ರ ಗುರುವಾರ ತಿಳಿಸಿದೆ. ವಿನಾಶಕಾರಿ ಭೂಕಂಪದ ಸಂತ್ರಸ್ತರಿಗೆ ನೆರವಾಗಲು ರಕ್ಷಣಾ ಕಾರ್ಯಕರ್ತರು ದಿನವಿಡೀ ದುಡಿಯುತ್ತಿದ್ದು, ಇನ್ನೂ ಅನೇಕ ಮಂದಿ ಕಟ್ಟಡಗಳ ಅವಶೇಷಗಳಲ್ಲಿ ಸಿಕ್ಕಿಬಿದ್ದಿರುವರೆಂದು ಶಂಕಿಸಲಾಗಿದೆ.
ಭೂಕಂಪ ಅಪ್ಪಳಿಸಿದ ಪ್ರದೇಶಕ್ಕೆ ದಕ್ಷಿಣದಲ್ಲಿ ಇನ್ನೊಂದು ಪ್ರಬಲ ಭೂಕಂಪ ಗುರುವಾರ ಅಪ್ಪಳಿಸಿದ್ದು, 7.0 ತೀವ್ರತೆಯ ಭೂಕಂಪದಿಂದ ಸಾವುನೋವಿನ ವರದಿಗಳು ಬಂದಿಲ್ಲವೆಂದು ಇಂಡೊನೇಶಿಯ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ ಸಂಭವಿಸಿದ 7.6 ತೀವ್ರತೆಯ ಭೂಕಂಪದಿಂದ ಪಡಾಂಗ್ ನಗರದಲ್ಲಿ ಕಟ್ಟಡಗಳು ಕುಸಿದುಬಿದ್ದವು ಮತ್ತು ಬೆಂಕಿಯ ಕೆನ್ನಾಲಿಗೆ ಚಾಚಿತು.
ಸುಮಾತ್ರ ದ್ವೀಪದ ತೀರದಲ್ಲಿರುವ ಪಡಾಂಗ್ ಸುಮಾರು ಒಂದು ಮಿಲಿಯ ಜನರಿಗೆ ನೆಲೆ ಕಲ್ಪಿಸಿದ್ದು, ಭೂಕಂಪದಿಂದ ವಿದ್ಯುತ್ ಮತ್ತು ಸಂಪರ್ಕ ಕಡಿದಿದೆ.ಈ ಸ್ಥಳದಲ್ಲಿರುವ ರಕ್ಷಣಾ ಸಿಬ್ಬಂದಿಯು ಇದುವರೆಗೆ ಸುಮಾರು 200 ಜನರು ಸತ್ತಿದ್ದಾರೆಂದು ಅಂದಾಜು ಮಾಡಿದೆಯೆಂದು ಹಾನಿ ನಿರ್ವಹಣೆ ಸಂಸ್ಥೆ ವಕ್ತಾರ ಪ್ರಿಯಾದಿ ಕಾರ್ಡಾನೊ ಜಕಾರ್ತದಲ್ಲಿ ತಿಳಿಸಿದರು.ಆದರೆ ಸತ್ತವರ ಸಂಖ್ಯೆ ಇನ್ನಷ್ಟು ಹೆಚ್ಚುವುದೆಂದು ನಿರೀಕ್ಷಿಸಲಾಗಿದೆ.
ಇಂಡೊನೇಶಿಯ ಸೇನೆ ಮತ್ತು ಆರೋಗ್ಯ ಸಚಿವಾಲಯದ ರಕ್ಷಣಾ ತಂಡವು ನಗರವನ್ನು ಮತ್ತು ಸುತ್ತಮುತ್ತಲ ಪಟ್ಟಣವನ್ನು ತಲುಪಿದ್ದಾರೆ. ಕುಸಿದ ಆಸ್ಪತ್ರೆಗಳು, ಶಾಲೆಗಳು ಮತ್ತು ಮನೆಗಳ ಅವಶೇಷಗಳಲ್ಲಿ ಸಿಕ್ಕಿಬಿದ್ದು ಜೀವಂತವಾಗಿ ಉಳಿದವರನ್ನು ರಕ್ಷಿಸುವುದು ಅವರ ಕೆಲಸವಾಗಿದ್ದು, ಅವಶೇಷಗಳನ್ನು ಮೇಲೆತ್ತಲು ಭಾರೀ ಯಂತ್ರಗಳ ಅಗತ್ಯವಿದ್ದು, ಶೀಘ್ರದಲ್ಲಿ ನಿರೀಕ್ಷಿಸಿರುವುದಾಗಿ ತಿಳಿಸಿದರು. ಪಡಾಂಗ್ ವಿಮಾನನಿಲ್ದಾಣದಲ್ಲಿ ಮೇಲ್ಛಾವಣಿಯ ಭಾಗ ಕುಸಿದಿದ್ದು, ಲೋಹದ ಬೀಮ್‌ಗಳು ಕೆಳಗೆ ಜೋತಾಡುತ್ತಿದ್ದವು ಎಂದು ವರದಿಗಾರರೊಬ್ಬರು ಹೇಳಿದ್ದಾರೆ.