ಇಂಟರ್‌ನೆಟ್‌ನಲ್ಲಿ ಬುಷ್ ವಿರೋಧಿ ಲೇಖನ ಬರೆದ ಆರೋಪದ ಮೇಲೆ ಅಮೆರಿಕದ ಜೈಲಿನಲ್ಲಿ ಕೊಳೆಯುತ್ತಿರುವ ತಮ್ಮ ಪುತ್ರ ವಿಕ್ರಂನಿಗೆ ನ್ಯಾಯ ಒದಗಿಸುವಂತೆ ಕೋರಿ ವಿಕ್ರಂ ತಂದೆ ಭಾರತದ ನೌಕಾದಳದ ಮಾಜಿ ಕ್ಯಾಪ್ಟನ್ ಸುಬ್ಬರಾವ್ ಬುದ್ಧಿಯ ಕರೆಗೆ ಭಾರತ ಸರ್ಕಾರ ಕಡೆಗೂ ಓಗೊಟ್ಟಿದೆ. ಪುರ್‌ಡ್ಯೂ ವಿವಿಯಲ್ಲಿ ಗಣಿತ ಅಧ್ಯಯನ ಮಾಡುತ್ತಿದ್ದ ಪಿಎಚ್‌ಡಿ ವಿದ್ಯಾರ್ಥಿ ವಿಕ್ರಂ ಬುದ್ದಿ ಈಗ ಬುಷ್ ವಿರೋಧಿ ಬರಹ ಬರೆದ ಆರೋಪದ ಮೇಲೆ ಜೈಲಿನ ಅತಿಥಿಯಾಗಿದ್ದಾರೆ.
ಆದರೆ ತಾವು ಅಂತಹದ್ದನ್ನು ಬರೆದೇ ಇಲ್ಲವೆಂದು ವಿಕ್ರಂ ಹೇಳುತ್ತಿದ್ದು, ಭಾರತೀಯ ನೌಕಾದಳದ ಮಾಜಿ ಕ್ಯಾಪ್ಟನ್ ಆಗಿರುವ ಅವರ ತಂದೆ ತಮ್ಮ ಪುತ್ರನಿಗೆ ನೆರವು ನೀಡಲು ಏಕಾಂಗಿ ಹೋರಾಟ ನಡೆಸುತ್ತಿದ್ದು, ತಮ್ಮ ಪುತ್ರನಿಗೆ ಕರುಣೆ ತೋರಿಸಬೇಕಿಲ್ಲ, ಬದಲಿಗೆ ನ್ಯಾಯ ಒದಗಿಸಿಯೆಂದು ಕೇಳಿದ್ದಾರೆ.ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕೂಡ ಬುದ್ದಿಯ ವಕೀಲರನ್ನು ಭೇಟಿ ಮಾಡಿ ಬುದ್ದಿಯ ಬಿಡುಗಡೆಗೆ ತಮ್ಮ ಕೈಲಾದ ಪ್ರಯತ್ನ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ.ಪುರ್ಡ್ಯು ವಿವಿಯ ವೆಬ್‌ಸೈಟ್ ಹ್ಯಾಕ್ ಮಾಡಿರಬಹುದಾದ ಸಾಧ್ಯತೆಯಿದೆಯೆಂದು ಅಮೆರಿಕಕ್ಕೆ ಭಾರತ ಸಂದೇಶ ಮುಟ್ಟಿಸಿದ್ದು, ಬುದ್ದಿ ಅದನ್ನು ಬರೆದಿರದೇ ಇರಬಹುದೆಂದು ತಿಳಿಸಿದೆ.
ಬುದ್ದಿ ವಿರುದ್ಧ ಯಾವುದೇ ಶಿಕ್ಷೆ ಪ್ರಕಟಿಸದಿದ್ದರೂ ಅವರನ್ನು ಜೈಲಿನಲ್ಲಿಡಲಾಗಿದೆಯೆಂದು ಭಾರತ ಸರ್ಕಾರ ಗಮನಸೆಳೆದಿದೆ. ಇದಕ್ಕೆ ಉತ್ತರವಾಗಿ ಈ ಪ್ರಕರಣವನ್ನು ನ್ಯಾಯಾಂಗ ಇಲಾಖೆಗೆ ಒಪ್ಪಿಸಿದ್ದು, ಅದು ಪ್ರಕರಣದ ನೇರ ಹೊಣೆ ಹೊರುತ್ತದೆಂದು ಅಮೆರಿಕ ಸರ್ಕಾರ ತಿಳಿಸಿದೆ. ಎಸ್.ಎಂ.ಕೃಷ್ಣ ಅವರು ಈ ಪ್ರಕರಣ ನಿಭಾಯಿಸುವ ಇಬ್ಬರು ವಕೀಲರಿಗೆ ಕೈಲಾದ ನೆರವು ನೀಡುವುದಾಗಿ ಭರವಸೆ ನೀಡಿದ್ದರೂ, ವಿಕ್ರಂಗೆ ನ್ಯಾಯ ನೀಡುವುದು ಅಮೆರಿಕ ಸರ್ಕಾರದ ಕೈಯಲ್ಲಿಲ್ಲದೇ ಸ್ವತಂತ್ರ ನ್ಯಾಯಾಂಗದ ಕೈಯಲ್ಲಿದೆ.
ನ್ಯಾಯಾಂಗ ಇಲಾಖೆಯಲ್ಲಿ ಹಸ್ತಕ್ಷೇಪ ಅಥವಾ ಪ್ರಭಾವ ಬೀರುವಂತೆ ಅಮೆರಿಕಕ್ಕೆ ಭಾರತ ತಿಳಿಸುವಂತಿಲ್ಲ. ವೆಬ್‌ಸೈಟ್‌ನಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಬುಷ್ ಮತ್ತಿತರರಿಗೆ ಆನ್‌ಲೈನ್ ಬೆದರಿಕೆವೊಡ್ಡಿದ ಆರೋಪ ಹೊತ್ತ ವಿಕ್ರಂನನ್ನು ಪುರ್ಡ್ಯೂ ವಿವಿ ಕ್ಯಾಂಪಸ್‌ನಿಂದ ಪೊಲೀಸರು ಏಪ್ರಿಲ್ 2006ರಲ್ಲಿ ಬಂಧಿಸಿದ್ದರು. ಕ್ಯಾಂಪಸ್‌ನಿಂದ ಬೆದರಿಕೆ ಸಂದೇಶ ಕಳಿಸಿರುವುದಾಗಿ ತಾಂತ್ರಿಕವಾಗಿ ಇನ್ನೂ ಸಾಬೀತಾಗಿಲ್ಲವಾದರೂ, ಅವರು ಇನ್ನೂ ಬಂಧೀಖಾನೆಯಲ್ಲಿದ್ದು, ತಾವು ಮಾಡಿರದ ತಪ್ಪಿಗಾಗಿ ಶಿಕ್ಷೆಗೆ ಕಾದಿದ್ದಾರೆ.