ಲಾಹೋರ್‌ಗೆ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಪಹರಿಸಿದ ಸೂತ್ರಧಾರಿ ಕೆನಡಾದಿಂದ ಭಾರತಕ್ಕೆ ಗಡೀಪಾರಿನ ಶಿಕ್ಷೆಯನ್ನು ಎದುರಿಸುತ್ತಿದ್ದು, ಕೆನಡಾದಲ್ಲಿ ಕಾನೂನು ಅಭ್ಯಾಸ ಮಾಡಲು ಅನುಮತಿ ನೀಡುವಂತೆ ಕೋರಿದ್ದಾನೆ. 1984ರಲ್ಲಿ ಶ್ರೀನಗರದಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಲಾಹೋರ್‌ಗೆ ಅಪಹರಿಸಿದ ಐವರು ಸಿಖ್ ಯುವಕರಿಗೆ 46 ವರ್ಷ ವಯಸ್ಸಿನ ಪರ್ಮೀಂದರ್ ಸಿಂಗ್ ಸಾಯ್ನಿ ರಿಂಗ್ ಲೀಡರ್ ಆಗಿದ್ದ.
ಪಾಕಿಸ್ತಾನದ ಅಧಿಕಾರಿಗಳಿಗೆ ಅಪಹರಣಕಾರರು ಶರಣಾದ ಬಳಿಕ 17 ಗಂಟೆಗಳ ಅಪಹರಣ ನಾಟಕ ಅಂತ್ಯಗೊಂಡಿತ್ತು.ಲಾಹೋರ್ ಕೋರ್ಟ್ ಸಾಯ್ನಿಯ ವಿಚಾರಣೆ ನಡೆಸಿ ಮರಣದಂಡನೆ ಶಿಕ್ಷೆ ವಿಧಿಸಿದ ಬಳಿಕ, ಮರಣದಂಡನೆಯನ್ನು ಜೀವಾವಧಿಗೆ ಪರಿವರ್ತಿಸಲಾಯಿತು. 10 ವರ್ಷ ಜೈಲುವಾಸ ಅನುಭವಿಸಿದ ಬಳಿಕ ಅವನನ್ನು ಪಾಕಿಸ್ತಾನ ತ್ಯಜಿಸುವಂತೆ ಕೇಳಲಾಗಿತ್ತು.
1995ರಲ್ಲಿ ಸಾಯ್ನಿ ಅಕ್ರಮವಾಗಿ ಬಲ್ಬೀರ್ ಸಿಂಗ್ ಹೆಸರಿನಲ್ಲಿ ನಕಲಿ ಆಫ್ಘನ್ ಪಾಸ್‌ಪೋರ್ಟ್ ನೆರವಿನಿಂದ ಕೆನಡಾ ಪ್ರವೇಶಿಸಿದ್ದನು. ಇಲ್ಲಿಗೆ ಆಗಮಿಸಿದ್ದ ಅವನು ಬಿಎ ಮತ್ತು ಕಾನೂನು ಡಿಗ್ರಿ ಗಳಿಸಿದ್ದರೂ ತನ್ನ ಗಡೀಪಾರು ಆದೇಶದ ವಿರುದ್ಧ ಹೋರಾಡುತ್ತಿದ್ದ.ರಾಷ್ಟ್ರೀಯ ಬೆದರಿಕೆ ಪಟ್ಟಿಯಲ್ಲಿರುವ ಸಾಯ್ನಿ ಕೆನಡಾ ಲಾ ಸೊಸೈಟಿಯನ್ನು ತನಗೆ ಕಾನೂನು ಅಭ್ಯಾಸಕ್ಕೆ ಅನುಮತಿ ನೀಡುವಂತೆ ಕೇಳಿದ್ದಾನೆ.
ತನ್ನ ಹಿಂದಿನ ಜೀವನದ ಬಗ್ಗೆ ವಿಷಾದ ವ್ಯಕ್ತಪಡಿಸಿ, ಈ ರಾಷ್ಟ್ರದಲ್ಲಿ ಹೊಸ ಜೀವನ ಬಯಸುವುದಾಗಿ ಸಾಯ್ನಿ ತಿಳಿಸಿದ್ದ. ಆದರೆ ಕಾನೂನು ಅಭ್ಯಾಸ ಮಾಡಲು ಅನುಮಿತಿಸಬೇಕೆಂಬ ಸಾಯ್ನಿ ಮನವಿಯನ್ನು ಲಾ ಸೊಸೈಟಿ ವಕೀಲರು ತಳ್ಳಿಹಾಕಿದ್ದು, ಕಳೆದ 15 ವರ್ಷಗಳಲ್ಲಿ ಕೋರ್ಟ್ ಮತ್ತು ಟ್ರಿಬ್ಯೂನಲ್‌ಗಳು ಸಾಯ್ನಿ ಸಾರ್ವಜನಿಕರು ಮತ್ತು ಭದ್ರತೆಗೆ ಬೆದರಿಕೆಯೆಂದು ಘೋಷಿಸಿದ್ದು ಸಾಯ್ನಿ ಅಲ್ಲಿ ಉಳಿಯಬಾರದೆಂದು ಹೇಳಿದ್ದಾಗಿ ತಿಳಿಸಿದ್ದಾರೆ.