ರಾಷ್ಟ್ರಪಿತ ಮಹಾತ್ಮ ಗಾಂಧಿ ಹುಟ್ಟುಹಬ್ಬದ ಸಂದರ್ಭದಲ್ಲಿ ಜಗತ್ತು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸುತ್ತಿರುವ ನಡುವೆ, ಮಹಾತ್ಮ ಗಾಂಧಿಯ ಭಾರತದಲ್ಲಿ ಅಮೆರಿಕದ ಬೇರುಗಳಿವೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಶುಕ್ರವಾರ ತಿಳಿಸಿದ್ದಾರೆ.
ಮಾರ್ಟಿನ್ ಲೂಥರ್ ಕಿಂಗ್ ಜೂ. 1959ರಲ್ಲಿ ಭಾರತದ ಯಾತ್ರೆ ಕೈಗೊಂಡಿದ್ದಾಗ ಅವರು ಹಂಚಿಕೊಂಡ ಮಹಾತ್ಮ ಗಾಂಧಿ ಬೋಧನೆಗಳು ಮತ್ತು ತತ್ವಗಳು ನಾಗರಿಕ ಹಕ್ಕು ಆಂದೋಳನದ ಮೂಲಕ ಅಮೆರಿಕ ಸಮಾಜದಲ್ಲಿ ಪರಿವರ್ತನೆ ಉಂಟುಮಾಡಿತು ಎಂದು ಮಹಾತ್ಮ ಗಾಂಧೀಜಿಯವರ ಜನ್ಮವಾರ್ಷಿಕೋತ್ಸವದ ಸಂದರ್ಭದಲ್ಲಿ ಒಬಾಮಾ ಸ್ಮರಿಸಿದ್ದು, ಮಹಾತ್ಮ ಗಾಂಧಿಯವರಿಗೆ ಅಮೆರಿಕನ್ನರು ಅಪಾರ ಋಣಿಯಾಗಿದ್ದಾರೆಂದು ನುಡಿದರು.
ಮಹಾತ್ಮ ಗಾಂಧಿಯ ಭಾರತದಲ್ಲಿ ಮತ್ತು ಗಾಂಧೀಜಿಯ ಅಹಿಂಸಾ ಚಳವಳಿಯಲ್ಲಿ ಅಮೆರಿಕದ ಬೇರುಗಳು ಅಡಗಿವೆಯೆಂದು ಒಬಾಮಾ ಹೇಳಿಕೆಯಲ್ಲಿ ತಿಳಿಸಿದರು. ಗಾಂಧೀಜಿಯ ಅಹಿಂಸಾ ಸಂದೇಶವನ್ನು ಬಿಂಬಿಸಲು ಇದು ಮುಖ್ಯ ಕ್ಷಣವಾಗಿದ್ದು, ಜಗತ್ತಿನಾದ್ಯಂತ ಜನರು ಮತ್ತು ರಾಜಕೀಯ ಆಂದೋಳನಗಳಿಗೆ ಅಹಿಂಸಾ ಚಳವಳಿ ಸ್ಫೂರ್ತಿ ನೀಡುವುದನ್ನು ಮುಂದುವರಿಸಿದೆಯೆಂದು ಅವರು ತಿಳಿಸಿದರು.
ನ್ಯಾಯಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟ, ಎಲ್ಲರಿಗೂ ಸಹನಶೀಲರಾದ, ಅಹಿಂಸಾ ಪ್ರತಿಭಟನೆ ಮೂಲಕ ಪರಿವರ್ತನೆ ಸೃಷ್ಟಿಸಿದ ಮಹಾನ್ ವ್ಯಕ್ತಿಯ ಹುಟ್ಟುಹಬ್ಬದ ಆಚರಣೆಯಲ್ಲಿ ಭಾರತದ ಜನರ ಜತೆಗೂಡುವುದಾಗಿ ಒಬಾಮಾ ಹೇಳಿದರು.