ಪ್ರಜಾಪ್ರಭುತ್ವ ಪರ ಕಣ್ಮಣಿ ಆಂಗ್ ಸಾನ್ ಸೂಕಿ ತಮಗೆ ವಿಸ್ತರಿತ ಗೃಹಬಂಧನ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ಮ್ಯಾನ್ಮಾರ್ ಕೋರ್ಟ್ ತಳ್ಳಿಹಾಕಿದೆ. ಜುಂಟಾ ಆಡಳಿತದ ರಾಷ್ಟ್ರದ ಜತೆ ಮರುಮಾತುಕತೆಯಲ್ಲಿ ನಿರತವಾಗಿದ್ದ ಅಮೆರಿಕಕ್ಕೆ ಇದರಿಂದ ನಿರಾಶೆಯಾಗಿದೆ.ಯಾಂಗಾನ್ ವಿಭಾಗೀಯ ಕೋರ್ಟ್ ನ್ಯಾಯಾಧೀಶರು ಸೂಕಿಯ ಶಿಕ್ಷೆಯನ್ನು ಎತ್ತಿಹಿಡಿದಿದ್ದಾರೆಂದು ಸೂಕಿಯ ವಕೀಲರು ತಿಳಿಸಿದ್ದಾರೆ.
ಮೇಲ್ಮನವಿ ತಿರಸ್ಕೃತವಾಗಿದ್ದು, ನಾವು ಅದನ್ನು ಹೈಕೋರ್ಟ್‌ಗೆ ಒಯ್ಯುವುದಾಗಿ ಸೂಕಿ ವಕೀಲ ಮತ್ತು ಎನ್‌ಎಲ್‌ಡಿ ವಕ್ತಾರ ನ್ಯಾನ್ ವಿನ್ ವಿಚಾರಣೆ ಬಳಿಕ ತಿಳಿಸಿದ್ದಾರೆ. ತೀರ್ಪು ನೀಡಿದಾಗ ಸೂಕಿ ಹಾಜರಿರಲ್ಲವೆಂದು ತಿಳಿದುಬಂದಿದ್ದು, ಸಮವಸ್ತ್ರ ಮತ್ತು ಸಾಮಾನ್ಯ ಉಡುಪಿನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಸೂಕಿಯನ್ನು ಬಿಡುಗಡೆ ಮಾಡುವಂತೆ ಮ್ಯಾನ್ಮಾರ್ ವಿರುದ್ಧ ಅಂತಾರಾಷ್ಟ್ರೀಯ ಒತ್ತಡ ತೀವ್ರವಾಗಿದೆ.
ವಿಶೇಷವಾಗಿ ಅಮೆರಿಕ ಬುಧವಾರ ಮ್ಯಾನ್ಮಾರ್ ಜತೆ ಸೂಕಿಯ ಬಿಡುಗಡೆ ಸಲುವಾಗಿ ಉನ್ನತ ಮಟ್ಟದ ಮಾತುಕತೆ ನಡೆಸಿತ್ತು. ಏತನ್ಮಧ್ಯೆ,ಜುಂಟಾ ಪ್ರಜಾಪ್ರಭುತ್ವಕ್ಕೆ ಹಿಂತಿರುಗುವ ತನಕ ಅದರ ವಿರುದ್ಧ ದಿಗ್ಬಂಧನ ತೆಗೆಯುವುದರ ವಿರುದ್ಧ ಅಮೆರಿಕ ಎಚ್ಚರಿಕೆ ನೀಡಿದೆ.