ಕಾನೂನು ಕ್ಷೇತ್ರಕ್ಕೆ ವಿದೇಶಿ ಸಂಸ್ಥೆಗಳ ಪ್ರವೇಶಕ್ಕೆ ಅನುವು: ಮೊಯ್ಲಿ
ಲಂಡನ್, ಶನಿವಾರ, 3 ಅಕ್ಟೋಬರ್ 2009( 09:39 IST )
ವಿದೇಶಿ ಸಂಸ್ಥೆಗಳು ಭಾರತದ ಕಾನೂನು ಸೇವಾ ಕ್ಷೇತ್ರ ಪ್ರವೇಶಿಸಲು ಅನುವು ಮಾಡಿಕೊಡುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಭಾರತದ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಐದು ದಿನಗಳ ಬ್ರಿಟನ್ ಪ್ರವಾಸದಲ್ಲಿರುವ ಅವರು, ಇಲ್ಲಿನ ಇಂಡಿಯಾ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಸ್ಪಷ್ಟಪಡಿಸಿದರು.
ಈ ಕುರಿತು ನಮ್ಮ ವಕೀಲರ ಸಂಘ ಕೆಲವು ಆಕ್ಷೇಪಗಳನ್ನು ಎತ್ತಿದ್ದು ಸರ್ಕಾರ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದ ಅವರು ಸದ್ಯದಲ್ಲೇ ಅಂತಿಮ ತೀರ್ಮಾನ ಹೊರಬೀಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾನೂನು ಸೇವಾ ಕ್ಷೇತ್ರವು ವಿದೇಶಿ ಸಂಸ್ಥೆಗಳ ಪ್ರವೇಶಕ್ಕೆ ಮುಕ್ತವಾಗಬೇಕೆಂಬುದನ್ನು ಈಗಾಗಲೇ ನಾವು ತಾತ್ವಿಕವಾಗಿ ಒಪ್ಪಿಕೊಂಡಿದ್ದೇವೆ. ಆದರೆ ವಕೀಲರ ಸಂಘದ ಸಹಮತವೂ ಇರಬೇಕೆಂಬುದು ನಮ್ಮ ಇಚ್ಛೆ ಎಂದು ಮೊಯ್ಲಿ ಹೇಳಿದರು.