ಮಹಾತ್ಮಾಗಾಂಧಿ ತವರು ರಾಷ್ಟ್ರವಾದ ಭಾರತ ಮತ್ತು ಮಹಾತ್ಮಾನ ಅಹಿಂಸಾ ಹೋರಾಟ ತತ್ವದಿಂದ ಅಮೆರಿಕ ಪ್ರಭಾವಿತವಾಗಿರುವುದು ನಿಚ್ಚಳ ಎಂದು ಅಧ್ಯಕ್ಷ ಬರಾಕ್ ಒಬಾಮ ನುಡಿದರು.
ಅಂತಾರಾಷ್ಟ್ರೀಯ ಅಹಿಂಸಾ ದಿನವೂ ಆದ ಗಾಂಧಿ ಜಯಂತಿಯಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಬದಲಾವಣೆ ತಂದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಮೇಲೆ ಗಾಂಧಿ ಬೋಧನೆ, ಆದರ್ಶಗಳ ಪ್ರಭಾವ ತುಂಬಾ ಆಗಿತ್ತು ಎಂದು ಸ್ಮರಿಸಿದರು.
ಜಗತ್ತಿನ ಉದ್ದಗಲಕ್ಕೂ ಜನತೆ ಮತ್ತು ರಾಜಕೀಯ ಆಂದೋಲನಗಳಿಗೆ ಸದಾ ಪ್ರೇರಣೆಯಾಗಿರುವ ಗಾಂಧಿಯವರ ಅಹಿಂಸಾ ಸಂದೇಶದ ಮಹತ್ವವನ್ನು ಮನನ ಮಾಡಿಕೊಳ್ಳಲು ಇದೊಂದು ಒಳ್ಳೆಯ ಸಂದರ್ಭ. ಗಾಂಧಿ ಅವರ ಆದರ್ಶದಂತೆ ಬದುಕಿ, ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನೂ ಗೌರವಿಸಿ ಬಾಳುವುದನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ವರೆಡೆಗೆ ಸಹನೆ ಹೊಂದಿದ್ದ, ನ್ಯಾಯಪರತೆಗಾಗಿ ಬದುಕಿದ ಹಾಗೂ ಅಹಿಂಸಾ ಪ್ರತಿರೋಧದ ಮೂಲಕವೇ ಬದಲಾವಣೆ ತಂದ ಮಹಾನ್ ಚೇತನ ಗಾಂಧಿ ಎಂದು ಒಬಾಮ ಬಣ್ಣಿಸಿದರು.