ಪೇಟ ತೆಗೆಯಬೇಕೆಂಬ ಆದೇಶದ ವಿರುದ್ಧ ಉದ್ಯೋಗ ನ್ಯಾಯಮಂಡಳಿಯ ಮೊರೆಹೋದ ಸಿಖ್ ಪೊಲೀಸ್ ಅಧಿಕಾರಿಯೊಬ್ಬರಿಗೆ 10,000 ಪೌಂಡ್ ಪರಿಹಾರ ನೀಡುವಂತೆ ಉದ್ಯೋಗ ನ್ಯಾಯಮಂಡಳಿ ತೀರ್ಪು ನೀಡಿದೆ. ಗಲಭೆ ನಿಯಂತ್ರಣ ತರಬೇತಿಗೆ ಪೇಟವನ್ನು ತೆಗೆದು ಹೆಲ್ಮೆಟ್ ಧರಿಸಬೇಕೆಂದು ಮೇಲಾಧಿಕಾರಿಗಳು ಆದೇಶಿಸಿದ್ದರಿಂದ ಧಾರ್ಮಿಕ ಮತ್ತು ಜನಾಂಗೀಯ ತಾರತಮ್ಯ ತೋರಲಾಗಿದೆಯೆಂದು ಗರ್ಮೇಲ್ ಸಿಂಗ್ ದೂರು ನೀಡಿದ್ದರು.
2004ರಲ್ಲಿ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್ ತಂಡವನ್ನು ಸೇರಿದ ಅಧಿಕಾರಿ ಸಿಖ್ ಸಂಪ್ರದಾಯವಾದಿ ಕುಟುಂಬದಲ್ಲಿ ಜನಿಸಿದ್ದು, ಸಾರ್ವಜನಿಕವಾಗಿ ಸಿಖ್ಖರು ಧರಿಸುವ ಪೇಟವನ್ನು ತೆಗೆಯುವುದು ಅಥವಾ ಅದನ್ನು ಬದಲಿಸುವುದು ಅವರ ಧರ್ಮದ ವಿರುದ್ಧವಾಗಿದೆ. ಮ್ಯಾಂಚೆಸ್ಟರ್‌ನಲ್ಲಿ ಮೂರು ವಾರಗಳ ವಿಚಾರಣೆ ಬಳಿಕ ಸಿಖ್ ಅಧಿಕಾರಿ ಅನುಭವಿಸಿದ ಪರೋಕ್ಷ ತಾರತಮ್ಯಕ್ಕಾಗಿ 3500 ಪೌಂಡ್ ಮತ್ತು ಮಾನಸಿಕ ಯಾತನೆ ಉಂಟುಮಾಡಿದ ಕಿರುಕುಳಕ್ಕಾಗಿ 6500 ಪೌಂಡ್ ಪರಿಹಾರ ನೀಡುವಂತೆ ನ್ಯಾಯಮಂಡಳಿ ಆದೇಶಿಸಿದೆ.
ಗಲಭೆ ನಿಯಂತ್ರಣ ತರಬೇತಿಗಾಗಿ ಸಿಖ್ ಅಧಿಕಾರಿ ಸಾರ್ಜಂಟ್ ಜತೆ ಭೇಟಿಯಲ್ಲಿ, ನೀನು ತಲೆಯ ಮೇಲಿರುವ ಆ ವಸ್ತುವನ್ನು ತೆಗೆಯುವಂತೆ ಸಾರ್ಜಂಟ್ ಆದೇಶಿಸಿದರೆಂದು ಸಿಖ್ ಪೊಲೀಸ್ ಹೇಳಿದ್ದಾರೆ. ಧಾರ್ಮಿಕ ಪೇಟದ ವಿನ್ಯಾಸ ಬದಲಿಸುವಂತೆ ಸಹ ತಮಗೆ ಆದೇಶಿಸಲಾಯಿತೆಂದು ಅವರು ಹೇಳಿದ್ದಾರೆ. ಪೇಟದ ವಿನ್ಯಾಸ ಬದಲಿಸುವಂತೆ ಹೇಳಿದ್ದರಿಂದ 'ಟಿವಿ ಸಿಟ್ ಕಾಮ್ ಓನ್ಲಿ ಫೂಲ್ಸ್ ಅಂಡ್ ಹಾರ್ಸಸ್'ನ ಹಾಸ್ಯ ಪಾತ್ರಧಾರಿಯಂತೆ ತಾವು ಕಾಣುವುದಾಗಿ ಅವರು ಭೀತಿ ವ್ಯಕ್ತಪಡಿಸಿದ್ದರು.
ಪೇಟ ಧರಿಸುವ ವಿಷಯದಲ್ಲಿ ಮಾಲೀಕರ ಜತೆ ಉದ್ಭವಿಸಿದ ಸುದೀರ್ಘ ಕಾಲದ ವಿವಾದದಿಂದ ತೀವ್ರ ಮಾನಸಿಕ ಒತ್ತಡ, ಅಸ್ವಸ್ಥತೆಗೆ ಗುರಿಯಾಗಿದ್ದಾಗಿ ಸಿಂಗ್ ದೂರಿನಲ್ಲಿ ತಿಳಿಸಿದ್ದರು.ಸಿಖ್ ಅಧಿಕಾರಿ ಮಾಡಿದ 15 ಆರೋಪಗಳಲ್ಲಿ 13 ಆರೋಪಗಳನ್ನು ನ್ಯಾಯಮಂಡಳಿ ತಿರಸ್ಕರಿಸಿತು. ಆದರೆ ನ್ಯಾಯಮಂಡಳಿಯು ಸಿಖ್ ಅಧಿಕಾರಿ ಪರೋಕ್ಷ ಮತ್ತು ಧಾರ್ಮಿಕ ತಾರತಮ್ಯದ ಒಂದು ಪ್ರಕರಣದಲ್ಲಿ ಮಾತ್ರ ತೊಂದರೆ ಅನುಭವಿಸಿದ್ದಾರೆಂದು ತೀರ್ಪು ನೀಡಿದೆ.