ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಕೋರ್ಟ್ ಶನಿವಾರ ಮುಂಬೈ ಭಯೋತ್ಪಾದನೆ ದಾಳಿಗಳನ್ನು ಕುರಿತ ವಿಚಾರಣೆಯನ್ನು ಪುನಃ ಮುಂದೂಡಿದೆ. ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಆರಂಭವಾದ ವಿಚಾರಣೆಯನ್ನು ಕೆಲವೇ ನಿಮಿಷಗಳಲ್ಲಿ ಅಕ್ಟೋಬರ್ 10ರವರೆಗೆ ಮುಂದೂಡಿತು. ದಾಳಿಗೆ ಸಂಬಂಧಿಸಿದಂತೆ ಕೋರ್ಟ್ 7 ಮಂದಿ ಶಂಕಿತರ ವಿಚಾರಣೆ ನಡೆಸುತ್ತಿದ್ದು, ಲಷ್ಕರೆ ಕಮಾಂಡರ್ ಜಾಕಿರ್ ರೆಹ್ಮಾನ್ ಲಖ್ವಿ ಕೂಡ ಶಂಕಿತರಲ್ಲಿ ಸೇರಿದ್ದಾನೆ.
ಇದಕ್ಕೆ ಮುಂಚೆ ಸೆಪ್ಟೆಂಬರ್ 26ರಂದು ಕೋರ್ಟ್ ನ್ಯಾಯಾಧೀಶರು ಹಾಜರಾಗದಿದ್ದರಿಂದ ವಿಚಾರಣೆಯನ್ನು ಅ.3ರವರೆಗೆ ಮುಂದೂಡಿತ್ತು. ನ್ಯಾಯಾಧೀಶರು ರಜೆಯಲ್ಲಿರುವುದರಿಂದ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಮುಂದಿನ ವಿಚಾರಣೆ ದಿನವನ್ನು ಅ.3ಕ್ಕೆ ಮುಂದೂಡಲಾಗಿದೆಯೆಂದು ಶಂಕಿತರನ್ನು ಪ್ರತಿನಿಧಿಸುವ ಪ್ರತಿವಾದಿ ವಕೀಲ ಶಾಬಾಜ್ ರಾಜ್ಪುಟ್ ತಿಳಿಸಿದ್ದರು.
ಮುಂಬೈ ದಾಳಿಗಳನ್ನು ಕುರಿತು ಅ.3ರಿಂದ ವಿಚಾರಣೆ ಆರಂಭಿಸುವುದಾಗಿ ಪಾಕಿಸ್ತಾನದ ಪ್ರಕಟಣೆಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ವಿಚಾರಣೆ ಬಗ್ಗೆ ಭಾರತಕ್ಕೆ ನಿಗಾವಹಿಸುವುದು ಸಾಧ್ಯವಾಗುತ್ತಿಲ್ಲವೆಂದು ಹೇಳಿದ್ದರು. 26/11 ವಿಚಾರಣೆ ಮುಂಬೈನ ಕೋರ್ಟ್‌ನಲ್ಲಿ ಮುಕ್ತವಾಗಿ ನಡೆದಿರುವಾಗ ಪಾಕಿಸ್ತಾನಕ್ಕೆ ಹಾಗೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲವೆಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಪ್ರಶ್ನಿಸಿದ್ದರು.
ಮುಕ್ತವಾದ ವಿಚಾರಣೆಯು ಹೆಚ್ಚು ಪಾರದರ್ಶಕವಾಗಿದ್ದು, ಕೋರ್ಟ್ ವಿಚಾರಣೆಯ ವಿಶ್ವಾಸಾರ್ಹತೆ ಮತ್ತು ನಂಬಿಕೆಯ ಬಗ್ಗೆ ಯಾವುದೇ ಅನುಮಾನಕ್ಕೆ ಆಸ್ಪದ ನೀಡುವುದಿಲ್ಲವೆಂದು ನಿಕಂ ಹೇಳಿದ್ದಾರೆ. ಮುಂಬೈನಲ್ಲಿ ಮುಕ್ತ ವಿಚಾರಣೆಗೆ ಸಾಕಷ್ಟು ಭದ್ರತೆ ಒದಗಿಸಲಾಗಿದೆಯೆಂದು ಅವರು ಹೇಳಿದ್ದಾರೆ. 26/11 ವಿಚಾರಣೆಯ ಬಗ್ಗೆ ಪಾಕಿಸ್ತಾನದ ಮಂದ ಧೋರಣೆಯನ್ನು ಭಾರತ ಟೀಕಿಸಿದ್ದು, 26/11 ದುಷ್ಕರ್ಮಿಗಳನ್ನು ಶಿಕ್ಷಿಸುವವರೆಗೆ ಯಾವುದೇ ಮಾತುಕತೆ ಅರ್ಥಪೂರ್ಣವೆನಿಸುವುದಿಲ್ಲವೆಂದು ಹೇಳಿದೆ.