ಅಂತಾರಾಷ್ಟ್ರೀಯ ಅಹಿಂಸಾ ದಿನದ ಅಂಗವಾಗಿ, ವಿಶ್ವಸಂಸ್ಥೆಯು ಮಹಾತ್ಮ ಗಾಂಧಿ ಅವರ 140ನೇ ಜನ್ಮವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ಅಂಚೆಚೀಟಿಯೊಂದನ್ನು ಬಿಡುಗಡೆ ಮಾಡಿದೆ.
ವಿಶ್ವಸಂಸ್ಥೆ ಅಂಚೆ ಆಡಳಿತವು ಮಿಯಾಮಿ ಮೂಲದ ಕಲಾವಿದ ಫರ್ಡೀ ಪಾಚೆಕೊ ವಿನ್ಯಾಸಗೊಳಿಸಿದ ಒಂದು ಡಾಲರ್ ಮೌಲ್ಯದ ಗಾಂಧೀಜಿ ಅಂಚೆಚೀಟಿಯನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರಪಿತನನ್ನು ಕೆಂಪು, ನೀಲಿ ಮತ್ತು ಚಿನ್ನದ ಬಣ್ಣದಲ್ಲಿ ಬಿಡಿಸಲಾಗಿದೆ.ಮಹಾತ್ಮ ಗಾಂಧಿ ಅಂಚೆಚೀಟಿಯಿರುವ ಮತ್ತು ವಿಶ್ವಸಂಸ್ಥೆ ಮುದ್ರೆಯಿರುವ ಲಕೋಟೆ ಕೂಡ ಮಾರಾಟಕ್ಕಿದೆ.
ಮಹಾತ್ಮ ಗಾಂಧಿ ಅವರ 140 ಜನ್ಮವಾರ್ಷಿಕೋತ್ಸವ ಆಚರಣೆಗೆ ಭಾರತೀಯ ರಾಜತಾಂತ್ರಿಕ ಕಚೇರಿ ಆಯೋಜಿಸಿದ್ದ ಸಮಾರಂಭದಲ್ಲಿ ಹಲವಾರು ವಿಶ್ವಸಂಸ್ಥೆ ಪ್ರತಿನಿಧಿಗಳು ಹಾಜರಿದ್ದರು. ಮಾನವಹಕ್ಕುಗಳ ರಕ್ಷಣೆ ಕ್ಷೇತ್ರದಲ್ಲಿ ನಮ್ಮ ಬಹುತೇಕ ಕೆಲಸಗಳಿಗೆ, ಮಹಾತ್ಮ ಗಾಂಧಿಯವರ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟವೇ ಮೂಲವಾಗಿದೆ ಎಂದು ವಿಶ್ವಸಂಸ್ಥೆಗೆ ಭಾರತದ ರಾಯಭಾರಿ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಮುಸ್ಲಿಮರು ಮತ್ತು ಮುಸ್ಲಿಮೇತರರ ನಡುವೆ ಕೋಮುಸಾಮರಸ್ಯ ಮೂಡಿಸುವ ಗಾಂಧೀಜಿಯ ಬದ್ಧತೆಯನ್ನು ಕುರಿತು ಜನರಲ್ ಅಸೆಂಬ್ಲಿಯ ಅಧ್ಯಕ್ಷ ಅಲಿ ಟ್ರೆಕಿ ಒತ್ತಿಹೇಳಿದರು. ಗಾಂಧೀಜಿಗೆ ಗೌರವ ಸಲ್ಲಿಸಿದ ಅಮೆರಿಕದ ರಾಯಭಾರಿ ಸೂಸಾನ್ ರೈಸ್, ಗಾಂಧಿ ಮಿಲಿಯಾಂತರ ಅಮೆರಿಕನ್ನರ ಮೇಲೆ ಪ್ರಭಾವ ಬೀರಿದ್ದಾರೆಂದು ಹೇಳಿದರು. ನಾಗರಿಕ ಹಕ್ಕು ರಕ್ಷಣೆ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜೂ. ಅವರು 1959ರಲ್ಲಿ ಗಾಂಧೀ ರಾಷ್ಟ್ರವನ್ನು ಕಾಣಲು ಭಾರತಕ್ಕೆ ಐತಿಹಾಸಿಕ ಪ್ರವಾಸ ಮಾಡಿದ ಬಗ್ಗೆ ರಾಯಭಾರಿಗಳಾದ ಪುರಿ ಮತ್ತು ರೈಸ್ ಉಭಯತ್ರರೂ ಹೇಳಿದರು.