ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನ.24ರಂದು ಶ್ವೇತಭವನದಲ್ಲಿ ಆತಿಥ್ಯ ವಹಿಸಲಿದ್ದಾರೆಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಈ ಭೇಟಿಯು ಅಮೆರಿಕ ಮತ್ತು ಭಾರತದ ನಡುವೆ ಬೆಳೆಯುತ್ತಿರುವ ವ್ಯೂಹಾತ್ಮಕ ಸಹಯೋಗ ಮತ್ತು ಅಮೆರಿಕನ್ನರು ಮತ್ತು ಭಾರತೀಯರ ನಡುವೆ ಸ್ನೇಹವೃದ್ಧಿಯ ಬಗ್ಗೆ ಗಮನಸೆಳೆಯುತ್ತದೆಂದು ಶ್ವೇತಭವನ ಶುಕ್ರವಾರ ಪ್ರಕಟಿಸಿದೆ.
ಭೇಟಿಯ ಕಾಲದಲ್ಲಿ ಒಬಾಮಾ ಮತ್ತು ಸಿಂಗ್ ಅವರು ಸಮಾನಹಿತಾಸಕ್ತಿಯ ವ್ಯಾಪಕ ಜಾಗತಿಕ, ಪ್ರಾದೇಶಿಕ, ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸಲಿದ್ದಾರೆ.ಉಭಯ ನಾಯಕರು ವ್ಯೂಹಾತ್ಮಕ ಮಾತುಕತೆಯನ್ನು ಕೂಡ ನಡೆಸುವರೆಂದು ನಿರೀಕ್ಷಿಸಲಾಗಿದೆ. ಒಬಾಮಾ ಮತ್ತು ಪ್ರಥಮ ಮಹಿಳೆ ಮಿಶೆಲೆ ಅವರು ಸಿಂಗ್ ಮತ್ತು ಪತ್ನಿ ಗುರುಶರಣ್ ಕೌರ್ ಅವರಿಗೆ ನ.24ರ ರಾತ್ರಿ ಔತಣಕೂಟದ ವ್ಯವಸ್ಥೆಯನ್ನು ಮಾಡಲಿದ್ದಾರೆ.
ಅಧ್ಯಕ್ಷ ಒಬಾಮಾ ಅವರು ಪ್ರಧಾನಿ ಸಿಂಗ್ ಅವರ ಸ್ವಾಗತಕ್ಕೆ ಮತ್ತು ಉಭಯ ರಾಷ್ಟ್ರಗಳ ಜನರ ಹಿತರಕ್ಷಣೆ ಸಲುವಾಗಿ ಸಹಭಾಗಿತ್ವ ವೃದ್ಧಿ ಮತ್ತು ಬಲಪಡಿಸಲು ಅವರ ಜತೆ ಕೆಲಸ ಮಾಡುವುದನ್ನು ಎದುರುನೋಡುತ್ತಿರುವುದಾಗಿ ಶ್ವೇತಭವನದ ಪ್ರಕಟಣೆ ತಿಳಿಸಿದೆ.