2010ನೇ ಇಸವಿಯನ್ನು ಭಾರತ ಅಂತಾರಾಷ್ಟ್ರೀಯ ಹುಲಿ ವರ್ಷವಾಗಿ ಆಚರಿಸಲಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಜೈರಾಂ ರಮೇಶ್ ಪ್ರಕಟಿಸಿದ್ದಾರೆ. ಹುಲಿಗಳ ಸಂರಕ್ಷಣೆಯ ಮಹತ್ವವನ್ನು ವಿಶ್ವ ಮಟ್ಟದಲ್ಲಿ ಸಾರುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಮುಂದಿನ ವರ್ಷ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ವರ್ಷಾಚರಣೆಗೆ ವಿದ್ಯುಕ್ತ ಚಾಲನೆ ನೀಡಲಾಗುವುದು ಮತ್ತು ಇದೇ ವರ್ಷ ನವೆಂಬರ್‌ನಲ್ಲಿ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ರಷ್ಯಾ ಕೂಡ 2010ರ ಸೆಪ್ಟೆಂಬರ್‌ನಲ್ಲಿ ವಿಶ್ವ ಹುಲಿ ಸಮಾವೇಶ ನಡೆಸಲು ಉದ್ದೇಶಿಸಿದೆ.
ಈ ಕುರಿತು ಭಾರತ ನೀಡಿರುವ ಆಹ್ವಾನಕ್ಕೆ ವಿಶ್ವಬ್ಯಾಂಕ್ ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಇಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲಿನ ಸಮ್ಮತಿ ಸೂಚಿಸಿವೆ. ಇದೇವೇಳೆ, ವಿಶ್ವದ ಶೇ.60ರಷ್ಟು ಹುಲಿಗಳು ಭಾರತದಲ್ಲಿರುವ ಕಾರಣ ವರ್ಷಾಚರಣೆಗೆ ಭಾರತದ ನಾಯಕತ್ವವೇ ಸಮಂಜಸ ಎಂದು ಜೈರಾಂ ರಮೇಶ್ ಅಭಿಪ್ರಾಯಿಸಿದ್ದಾರೆ ಅಲ್ಲದೆ, ಹುಲಿ ಸಂರಕ್ಷಣೆಗೆ ಭಾರತ ಕೈಗೊಂಡಷ್ಟು ಕ್ರಮಗಳನ್ನು ಬೇರಾವುದೇ ದೇಶ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಹುಲಿ ಸಂರಕ್ಷಣೆಗಾಗಿ ವಿಶ್ವಬ್ಯಾಂಕ್ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಕರ್ನಾಟಕದ ನಾಗರಹೊಳೆ, ಉತ್ತರಾಖಂಡದ ರಾಜಾಜಿ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶದ ಕನ್ಹಾ ಅಭಯಾರಣ್ಯಗಳನ್ನು ಆರಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.