ಭೂಕಂಪ ಪೀಡಿತ ಪಶ್ಚಿಮ ಇಂಡೋನೇಶ್ಯದ ಪಡಾಂಗ್ ಎಂಬಲ್ಲಿ ಭೂಕಂಪದಿಂದಾಗಿ ಸಂಪೂರ್ಣ ಕುಸಿದುಬಿದ್ದ ಹೋಟೆಲ್ ಒಂದರ ಅವಶೇಷಗಳಡಿ ಸಿಲುಕಿರುವ ವ್ಯಕ್ತಿಯೊಬ್ಬ ತನ್ನ ಮೊಬೈಲಿನಿಂದ ಎಸ್ಎಂಎಸ್ ಕಳುಹಿಸಿದ್ದು, ತಾನೂ ಹಾಗೂ ಹಲವರು ಜೀವಂತ ಇರುವುದಾಗಿ ತಿಳಿಸಿದ್ದಾನೆ. ಕೊಠಡಿ ಸಂಖ್ಯೆ 338ರಲ್ಲಿ ತಂಗಿದ್ದ ವ್ಯಕ್ತಿ ಈ ಎಸ್‌ಎಂಎಸ್ ಕಳುಹಿಸಿದ್ದಾರೆನ್ನಲಾಗಿದೆ.
ಕನಿಷ್ಠ ಎಂಟು ಮಂದಿ ಹೋಟೆಲ್ ಒಳಗೆ ಸಿಲುಕಿರಬಹುದು ಎಂದು ಅಂದಾಜಿಸಲಾಗಿದ್ದು ಅವರ ರಕ್ಷಣೆಗೆ ಸಮರೋಪಾದಿಯ ತಯಾರಿ ನಡೆದಿದೆ. ಹೋಟೆಲ್ ಅವಶೇಷಗಳಡಿಯಿಂದ ಕೂಗುವ, ಚಪ್ಪಾಳೆ ಹೊಡೆಯುವ ಧ್ವನಿ ಕೇಳಿ ಬರುತ್ತಿದೆ ಎಂದು ಪಡಾಂಗ್ ಪೊಲೀಸರು ತಿಳಿಸಿದ್ದಾರೆ.
ಆರು ಅಂತಸ್ತಿನ ಹೋಟೆಲ್ ಸಂಪೂರ್ಣ ನೆಲ ಕಚ್ಚಿರುವುದರಿಂದ ಹೆಚ್ಚು ಮುಂಜಾಗ್ರತೆ ವಹಿಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.