ಇಂಡೊನೇಶಿಯ: ಮೃತದೇಹಗಳ ಸಾಮೂಹಿಕ ಸಮಾಧಿ
ಪಡಾಂಗ್, ಇಂಡೊನೇಶಿಯ, ಸೋಮವಾರ, 5 ಅಕ್ಟೋಬರ್ 2009( 15:10 IST )
ಭೂಕಂಪದಿಂದ ನಲುಗಿದ ಪಡಾಂಗ್ ನಗರದಲ್ಲಿ ಸುಮಾರು 3000 ಬಲಿಯಾಗಿದ್ದಾರೆಂದು ಶಂಕಿಸಲಾಗಿದ್ದು, ಮೃತರ ದೇಹಗಳ ಸಾಮೂಹಿಕ ಸಮಾಧಿಗೆ ಹೊಂಡ ತೋಡಲಾಗಿದೆ. ಭೂಕುಸಿತಗಳಿಂದ ಜೀವಂತ ಸಮಾಧಿಯಾದ ನೂರಾರು ಜನರ ನಡುವೆ ಜೀವದ ಕುರುಹನ್ನು ಪತ್ತೆಹಚ್ಚಲು ಸಮೀಪದ ಗುಡ್ಡಗಳಲ್ಲಿ ಗ್ರಾಮಸ್ಥರು ಮರದ ಹಾರೆಗಳಿಂದ ಅಗೆದು ಶೋಧಿಸಿದರು.
ಅವಶೇಷಗಳಲ್ಲಿ ಶೋಧಿಸಿದ ರಕ್ಷಣಾ ತಂಡಕ್ಕೆ ಇನ್ನಷ್ಟು ಬದುಕುಳಿದವರು ಸಿಗುವ ಅವಕಾಶ ಕಡಿಮೆಯೆಂದು ಹೇಳಲಾಗಿದೆ. ಕರಾವಳಿ ನಗರದಿಂದ ಒಳನಾಡಿನವರೆಗೆ ರಕ್ಷಣಾ ತಂಡ ತೆರಳಿದ್ದು, ಇಡೀ ಗ್ರಾಮಗಳು ಭೂಕುಸಿತಗಳಿಗೆ ತುತ್ತಾಗಿದೆ.
ಬದುಕುಳಿದ ಸಂತ್ರಸ್ತರು ಆಹಾರ, ನೀರು ಮತ್ತು ಆಶ್ರಯ ಪಡೆಯಲು ಹತಾಶ ಯತ್ನ ನಡೆಸಿದ್ದಾರೆ.ಸರ್ಕಾರ ಸತ್ತವರ ಸಂಖ್ಯೆಯನ್ನು 3000ವೆಂದು ಅಂದಾಜು ಮಾಡಿದ್ದು, ಪಡಾಂಗ್ ನಗರದಲ್ಲಿ ಹರಡುತ್ತಿರುವ ರೋಗಗಳು ಕಳವಳ ಮೂಡಿಸಿದ್ದು, ಕಟ್ಟಡಗಳ ಅವಶೇಷಗಳಲ್ಲಿ ಕೊಳೆತ ಶವಗಳ ಕಮಟು ವಾಸನೆ ಬರುತ್ತಿದೆಯೆಂದು ಇಂಡೊನೇಶಿಯ ಆರೋಗ್ಯ ಸಚಿವರು ಹೇಳಿದ್ದಾರೆ. ಪಡಾಂಗ್‌ನ ಟುಂಗುಲ್ ಹಿಟಾಮ್ ಸಾರ್ವಜನಿಕ ಸಮಾಧಿಸ್ಥಳದಲ್ಲಿ ಅಂಬಾಕಾಂಗ್ ಹೊಟೆಲ್‌ನಿಂದ ತೆಗೆದ 11 ಅಪರಿಚಿತ ದೇಹಗಳ ಸಾಮೂಹಿಕ ಸಮಾಧಿಗೆ ಹಳ್ಳವನ್ನು ತೋಡಲಾಗುತ್ತಿದೆ.