26/11 ಮುಂಬೈ ಭಯೋತ್ಪಾದನೆ ದಾಳಿಯ ಸೂತ್ರಧಾರಿ ಹಫೀಜ್ ಸಯೀದ್‌ನ ಬಂಧನಕ್ಕೆ ಯಾವುದೇ ಆದೇಶವಿಲ್ಲದ್ದರಿಂದ ಅವನು ಸ್ವತಂತ್ರ ವ್ಯಕ್ತಿಯಾಗಿದ್ದಾನೆಂದು ಲಾಹೋರ್ ಪೊಲೀಸರು ಹೇಳುವ ಮೂಲಕ ಸುಳ್ಳಿನ ಸರಪಣಿ ಪೋಣಿಸುವ ಪಾಕಿಸ್ತಾನದ ಕುತಂತ್ರ ಬಯಲಾಗಿದೆ.
ಸಯೀದ್‌ನನ್ನು ಬಂಧಿಸಲಾಗಿದೆಯೆಂದು ಕೇವಲ 15 ದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಅವರು ಹೇಳಿದ ಬಳಿಕ ಲಾಹೋರ್ ಪೊಲೀಸರು ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.
ಸಯೀದ್ ಬಂಧನಕ್ಕೆ ಯಾವುದೇ ಕಾನೂನುಬದ್ಧ ಆದೇಶವಿಲ್ಲದ್ದರಿಂದ ಅವನ ಚಲನವಲನಗಳ ಬಗ್ಗೆ ಯಾವುದೇ ನಿರ್ಬಂಧ ಹೇರಿಲ್ಲವೆಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ. ಸಯೀದ್‌ನನ್ನು ಬಂಧಿಸಲಾಗಿದೆಯೆಂದು ಗಿಲಾನಿ ಹೇಳಿಕೆಗೂ ಪೊಲೀಸರ ಹೇಳಿಕೆಗೂ ಅಜಗಜಾಂತರ ವ್ಯತ್ಯಾಸವಿದೆ. ಸಯೀದ್ ಕುರಿತಂತೆ ಪಾಕಿಸ್ತಾನ ಆಗಾಗ್ಗೆ ತನ್ನ ಧೋರಣೆಯನ್ನು ಬದಲಿಸುತ್ತಿದ್ದು, ಭಯೋತ್ಪಾದನೆ ಪ್ರಸರಿಸಲು ಕಾರಣರಾದ ವ್ಯಕ್ತಿಗಳನ್ನು ಬಂಧಿಸುವುದಾಗಿ ಜರ್ದಾರಿ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ.
ಇದಕ್ಕೆ ಮುಂಚೆ ಅಮೆರಿಕದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಪೊಲೀಸರು ಮುಂಬೈ ಭಯೋತ್ಪಾದನೆ ದಾಳಿಯ ಸೂತ್ರಧಾರಿ ಸಯೀದ್‌ನನ್ನು ಖಂಡಿತವಾಗಿ ಬಂಧಿಸುವುದಾಗಿ ಹೇಳಿದ್ದರು.