ಪಾಕಿಸ್ತಾನದ ಹೊಸ ತಾಲಿಬಾನ್ ಮುಖಂಡ ಹಕೀಮುಲ್ಲಾ ಮೆಹ್ಸೂದ್ ಪತ್ರಕರ್ತರಿಗೆ ತನ್ನ ದರ್ಶನ ನೀಡುವ ಮೂಲಕ ತನ್ನ ಸಾವನ್ನು ಕುರಿತ ಊಹಾಪೋಹಗಳಿಗೆ ಅಂತಿಮ ತೆರೆಎಳೆದಿದ್ದಾನೆ. ತಾಲಿಬಾನ್ ಮುಂಚಿನ ನಾಯಕ ಮತ್ತು ತನ್ನ ಪೂರ್ವಾಧಿಕಾರಿ ಬೈತುಲ್ಲಾ ಮೆಹ್ಸೂದ್ ಹತ್ಯೆ ವಿರುದ್ಧ ಮತ್ತು ಅಮೆರಿಕದ ಡ್ರೋನ್ ದಾಳಿಗಳ ವಿರುದ್ಧ ಮುಯ್ಯಿ ತೀರಿಸಿಕೊಳ್ಳುವುದಾಗಿ ಅವನು ಶಪಥ ತೊಟ್ಟಿದ್ದಾನೆ.
ಉಗ್ರಗಾಮಿ ಸಂಘಟನೆ ಮೇಲೆ ತನ್ನ ಹತೋಟಿ ಹೊಂದಿದ ಮೇಲೆ ಪ್ರಥಮ ಬಾರಿಗೆ ಹಕೀಮುಲ್ಲಾ ಮೆಹ್ಸೂದ್ ದೇಶದ ಬುಡಕಟ್ಟು ಪ್ರದೇಶದಲ್ಲಿ ಭಾನುವಾರ ವರದಿಗಾರರನ್ನು ಭೇಟಿ ಮಾಡಿದ್ದನೆಂದು ಡಾನ್ ಸೋಮವಾರ ವರದಿ ಮಾಡಿದೆ. ಹಕೀಮುಲ್ಲಾನ ನಾಟಕೀಯ ದರ್ಶನದಿಂದ ಕ್ಷಿಪಣಿ ದಾಳಿಯಿಂದ ಬೈತುಲ್ಲಾ ಮೆಹ್ಸೂದ್ ಹತನಾದ ಬಳಿಕ ಭುಗಿಲೆದ್ದ ನಾಯಕತ್ವ ಕಾದಾಟದಲ್ಲಿ ಹಕೀಮುಲ್ಲಾ ಹತನಾದನೆಂಬ ಊಹಾಪೋಹಗಳಿಗೆ ತೆರೆಬಿದ್ದಿದೆ.
ಇತರೆ ತಾಲಿಬಾನ್ ಕಮಾಂಡರ್‌ಗಳಿಂದ ಸುತ್ತುವರಿದಿದ್ದ ಹಕೀಮುಲ್ಲಾ ಮೆಹ್ಸೂದ್, ಸೋಮವಾರ ಮಾತ್ರ ತನ್ನ ಸಂದರ್ಶನವನ್ನು ಪ್ರಕಟಿಸಬೇಕೆಂಬ ಷರತ್ತಿನ ಮೇಲೆ ಮಾಧ್ಯಮದ ಜತೆ ಮಾತನಾಡಿದ್ದ. ಬೈತುಲ್ಲಾ ಮೆಹ್ಸೂದ್ ಹತ್ಯೆ ವಿರುದ್ಧ ಸೇಡುತೀರಿಸಿಕೊಳ್ಳುವುದಾಗಿಯೂ ಮತ್ತು ಆಫ್ಘಾನಿಸ್ತಾನ ಗಡಿಯ ಬುಡಕಟ್ಟು ಪ್ರದೇಶಗಳ ಮೇಲೆ ಡ್ರೋನ್ ದಾಳಿಗಳ ತೀವ್ರತೆ ವಿರುದ್ಧ ಪಾಕಿಸ್ತಾನ ಮತ್ತು ಅಮೆರಿಕದ ಮೇಲೆ ಪ್ರತಿದಾಳಿ ಮಾಡುವುದಾಗಿ ಅವನು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾನೆ.