ಜೀವಕೋಶಗಳ ವಂಶವಾಹಿ ನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ವ್ಯವಸ್ಥೆಯೊಂದನ್ನು ಶೋಧಿಸಿದ ಅಮೆರಿಕನ್ನರಾದ ಎಲಿಜಬೆತ್ ಎಚ್.ಬ್ಲಾಕ್‌ಬರ್ನ್, ಕ್ಯಾರೊಲ್ ಡಬ್ಲ್ಯು ಗ್ರೈಡರ್ ಮತ್ತು ಜಾಕ್ ಡಬ್ಲ್ಯು ಜೋಸ್ಟಾಕ್ ಔಷಧ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದಾರೆ.
ಡಿಎನ್‌ಎಯನ್ನು ಒಯ್ಯುವ ಸರಳಿನಂತ ರಚನೆಯಾದ ಕ್ರೋಮೋಸೋಮ್‌ಗಳು ಜೀವಕೋಶಗಳು ವಿಭಜನೆಯಾದಾಗ ಹೇಗೆ ನಶಿಸದಂತೆ ಸ್ವಯಂರಕ್ಷಣೆ ಪಡೆಯುತ್ತದೆಂಬ ನಿಗೂಢತೆಯನ್ನು ತ್ರಿವಳಿ ವಿಜ್ಞಾನಿಗಳು ಭೇದಿಸಿದ್ದಾರೆ.
ಬ್ಲಾಕ್‌ಬರ್ನ್, ಗ್ರೇಡರ್ ಮತ್ತು ಜೋಸ್ಟಾಕ್ ಅವರು ಜೀವಕೋಶಗಳ ಬಗ್ಗೆ ನಮ್ಮ ತಿಳಿವಳಿಕೆ ಕುರಿತು ಹೊಸ ಆಯಾಮವನ್ನು ನೀಡಿದ್ದು, ರೋಗ ವ್ಯವಸ್ಥೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ ಮತ್ತು ಹೊಸ ಚಿಕಿತ್ಸೆಗಳ ಅಭಿವೃದ್ಧಿಗೆ ಉತ್ತೇಜನ ನೀಡಿದೆಯೆಂದು ಪ್ರಶಸ್ತಿ ಸಮಿತಿಯು ಪ್ರಶಸ್ತಿಪತ್ರದಲ್ಲಿ ತಿಳಿಸಿದೆ. ಮೆಡಿಸಿನ್ ಪ್ರಶಸ್ತಿಯಲ್ಲಿ ಇಬ್ಬರು ಮಹಿಳೆಯರು ಹಂಚಿಕೊಂಡಿರುವುದು ಇದೇ ಮೊದಲ ಬಾರಿ ಎಂದು ಸಮಿತಿಯ ಸದಸ್ಯರು ಹೇಳಿದ್ದಾರೆ.
ಅಮೆರಿಕ ಮತ್ತು ಆಸ್ಟ್ರೇಲಿಯ ಪೌರತ್ವ ಪಡೆದಿರುವ ಬ್ಲಾಕ್‌ಬರ್ನ್ ಕ್ಯಾಲಿಫೋರ್ನಿಯ ವಿವಿಯ ಜೀವವಿಜ್ಞಾನ ಮತ್ತು ಫಿಸಿಯಾಲಜಿ ಪ್ರಾಧ್ಯಾಪಕರು, ಗ್ರೈಡರ್ ಬಾಲ್ಟಿಮೋರ್ ಜಾನ್ಸ್ ಹಾಪ್‌ಕಿನ್ಸ್ ವಿವಿಯ ಮಾಲಿಕ್ಯೂಲರ್ ಬಯಲಜಿ ಮತ್ತು ಜೆನೆಟಿಕ್ಸ್ ವಿಭಾಗದ ಪ್ರಾಧ್ಯಾಪಕರು. 'ಪ್ರಶಸ್ತಿ ಸಿಕ್ಕಿದ ಸುದ್ದಿ ಕೇಳಿ ತಮಗೆ ರೋಮಾಂಚನವಾಗಿದೆ. ಇದೊಂದು ಅನಿರೀಕ್ಷಿತವೆಂದು' ಗ್ರೈಡರ್ ದೂರವಾಣಿಯಲ್ಲಿ ಅಸೋಸಿಯೇಟ್ ಪ್ರೆಸ್‌ಗೆ ತಿಳಿಸಿದ್ದಾರೆ.