ಚಾರ್ಲೆಸ್ ಕಾವೊ, ವಿಲ್ಲಾರ್ಡ್ ಬಾಯ್ಲೆ ಮತ್ತು ಜಾರ್ಜ್ ಸ್ಮಿತ್ ಈ ವೂವರು ಭೌತವಿಜ್ಞಾನಿಗಳು 2009ನೇ ಸಾಲಿನ ಭೌತಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದಾರೆ. ಫೈಬರ್ ಆಪ್ಟಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳಲ್ಲಿ 'ಮಾಸ್ಟರ್ಸ್ ಆಫ್ ಲೈಟ್' ಕೆಲಸದ ಆದ್ಯಪ್ರವರ್ತನೆಗಾಗಿ ಈ ಪ್ರಶಸ್ತಿ ಅವರಿಗೆ ಸಂದಿದೆ.
ಮಾಹಿತಿ ತಂತ್ರಜ್ಞಾನ ಕ್ರಾಂತಿಗೆ ನಾಂದಿ ಹಾಡಿದ ಎರಡು ಉಪಕರಣಗಳನ್ನು ಸೃಷ್ಟಿಸಿದ್ದಕ್ಕಾಗಿ ಇಬ್ಬರು ಅಮೆರಿಕದ ವಿಜ್ಞಾನಿಗಳು ಸೇರಿದಂತೆ ಹಾಂಕಾಂಗ್ ಮೂಲದ ತಜ್ಞ ಚಾರ್ಲೆಸ್ ಕಾವೊ ಅವರನ್ನು ಶ್ಲಾಘಿಸಲಾಯಿತು. ಇಂದಿನ ನೆಟ್‌ವರ್ಕ್ ಸಮಾಜಗಳ ಅಡಿಪಾಯಕ್ಕೆ ರೂಪು ನೀಡಲು ನೆರವಾದ ಎರಡು ವೈಜ್ಞಾನಿಕ ಸಾಧನೆಗಾಗಿ ಈ ವರ್ಷದ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆಯೆಂದು ನೊಬೆಲ್ ಪ್ರಶಸ್ತಿ ತೀರ್ಪುಗಾರರ ಮಂಡಳಿ ಹೇಳಿದೆ.ದಿನನಿತ್ಯದ ಜೀವನಕ್ಕಾಗಿ ಪ್ರಾಯೋಗಿಕ ಸಂಶೋಧನೆಗಳನ್ನು ಅವರು ಮಾಡಿದ್ದು, ವೈಜ್ಞಾನಿಕ ಶೋಧನೆಗೆ ಹೊಸ ಉಪಕರಣವನ್ನು ಒದಗಿಸಿದ್ದಾರೆಂದು ಅವರನ್ನು ಹೊಗಳಲಾಗಿದೆ.ಅವುಗಳಲ್ಲೊಂದು ಫೈಬರ್ ಆಪ್ಟಿಕ್ ಕೇಬಲ್ ಬೆಳಕಿನ ವೇಗದಲ್ಲಿ ದತ್ತಾಂಶವನ್ನು ಪ್ರಸರಣ ಮಾಡುತ್ತದೆಂದು ನೊಬೆಲ್ ತೀರ್ಪುಗಾರರ ಮಂಡಳಿ ಹೇಳಿದೆ.
ಆಪ್ಟಿಕಲ್ ಸಂಪರ್ಕಕ್ಕಾಗಿ ಬೆಳಕನ್ನು ಫೈಬರ್‌ಗಳಲ್ಲಿ ಪ್ರಸರಣ ಮಾಡುವುದಕ್ಕೆ ಸಂಬಂಧಿಸಿದಂತೆ ಅಮೋಘ ಸಾಧನೆ ಮಾಡಿದ್ದಕ್ಕಾಗಿ ಪ್ರಶಸ್ತಿಯ ಅರ್ಧ ಮೊತ್ತವನ್ನು ಹಾಂಕಾಂಗ್ ಮೂಲದ ಕಾವೊ ಗೆದ್ದಿದ್ದಾರೆಂದು ತೀರ್ಪು ಮಂಡಳಿ ತಿಳಿಸಿದೆ. ನಾವು ವಿಶ್ವದಲ್ಲಿರುವ ಎಲ್ಲ ಗ್ಲಾಸ್ ಫೈಬರ್‌ಗಳನ್ನು ಹೊರತೆಗೆದರೆ 600 ದಶಲಕ್ಷ ಮೈಲು ಉದ್ದದ ಒಂದೇ ದಾರದ ಫೈಬರ್ ಸಿಗಲಿದ್ದು, ಭೂಮಿಯನ್ನು 25,000 ಬಾರಿ ಸುತ್ತುಹಾಕಲು ಸಾಕಾಗುತ್ತದೆಂದು ಅದು ಹೇಳಿದೆ.
ಕಾವೊ ಸಂಶೋಧನೆಯಿಂದ ಟೆಕ್ಸ್ಟ್, ಸಂಗೀತ, ಚಿತ್ರಗಳು ಮತ್ತು ವಿಡಿಯೊಗಳನ್ನು ಜಗತ್ತಿನಾದ್ಯಂತ ಕೆಲವೇ ಸೆಕೆಂಡಿನಲ್ಲಿ ವರ್ಗಾಯಿಸಲು ಸಾಧ್ಯವೆಂದು ಜ್ಯೂರಿ ತಿಳಿಸಿದೆ.ಬಾಯ್ಲೆ ಮತ್ತು ಸ್ಮಿತ್ ಪ್ರಶಸ್ತಿಯ ಇನ್ನುಳಿದ ಅರ್ಧ ಭಾಗದಲ್ಲಿ ವಿಜೇತರಾಗಿದ್ದು, ಇಮೇಜಿಂಗ್ ಸೆಮಿಕಂಡಕ್ಟರ್ ಸರ್ಕ್ಯೂಟ್ ಅಥವಾ ಸಿಸಿಡಿ ಸೆನ್ಸರ್ ಶೋಧನೆಗಾಗಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸಿಸಿಡಿ ಸೆನ್ಸರ್ ಡಿಜಿಟಲ್ ಕ್ಯಾಮೆರಾದ ಎಲೆಕ್ಟ್ರಾನಿಕ್ ಕಣ್ಣಿನಂತೆ ಕಾರ್ಯನಿರ್ವಹಿಸುತ್ತದೆ.