ಭಾರತದ ವಿರುದ್ಧ ಜಿಹಾದ್ ಹೋರಾಟ ನಡೆಸುವ ಸಲುವಾಗಿ ಶರಣಾಗತಿಯಾದ ಸುಮಾರು 60 ತಾಲಿಬಾನಿಗಳನ್ನು ಜಮ್ಮುಕಾಶ್ಮೀರದೊಳಕ್ಕೆ ನುಸುಳಿಸಲು ಪಾಕಿಸ್ತಾನ ಯೋಜಿಸುತ್ತಿದೆ. ಜೈಲಿಗೆ ಹೋಗಿ ಅಥವಾ ಗಡಿನಿಯಂತ್ರಣ ರೇಖೆಯನ್ನು ದಾಟಿ ಭಾರತದ ವಿರುದ್ಧ ಜಿಹಾದ್ ನಡೆಸಿ ಎಂದು ಐಎಸ್‌ಐ ಉಗ್ರಗಾಮಿಗಳಿಗೆ ಷರತ್ತು ಹಾಕಿದೆ. ಭಾರತದ ಗುಪ್ತಚರ ಇಲಾಖೆ ಕದ್ದಾಲಿಸಿದ ಮಾಹಿತಿಗಳಿಂದ ಈ ವಿಷಯ ಬೆಳಕಿಗೆ ಬಂದಿದೆ.
ತಾಲಿಬಾನಿಗಳಿಗೆ ಪ್ರಸ್ತಾಪಿಸಿರುವ ಜೈಲು ಅಥವಾ ಜಿಹಾದ್ ಆಯ್ಕೆಯು ಐಎಸ್‌ಐಗೆ ಉಪಯುಕ್ತ ಬದಲಾವಣೆಯಂತೆ ಕಾಣುತ್ತಿದೆ.ಆಫ್ಘಾನಿಸ್ತಾನದಲ್ಲಿ ಒಂದೊಮ್ಮೆ ನಿಕಟ ಮಿತ್ರರಾಗಿದ್ದ ತಾಲಿಬಾನ್ ಜತೆ ಪಾಕಿಸ್ತಾನ ಮಿಲಿಟರಿ ಹೋರಾಟ ನಡೆಸುತ್ತಿದ್ದು, ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ತಿರುಗಿಸಲು ಅದು ಪ್ರಯತ್ನಿಸುತ್ತಿದೆ. ಜಿಹಾದಿಗಳು ಪಾಕಿಸ್ತಾನದ ಮೇಲೆ ತಮ್ಮ ಬಂದೂಕನ್ನು ತಿರುಗಿಸಿದ ಬಳಿಕ ತಾಲಿಬಾನಿಗಳ ವಿರುದ್ಧ ಪಾಕಿಸ್ತಾನದ ಕಾರ್ಯಾಚರಣೆಯಿಂದ ಕಾಶ್ಮೀರದಲ್ಲಿ ತೊಂದರೆ ಉದ್ಭವಿಸಬಹುದೆಂದು ಭಾರತದ ಭದ್ರತಾವಲಯದಲ್ಲಿ ಕವಿದಿದ್ದ ಆತಂಕಗಳು ಈಗ ನಿಜವಾಗುತ್ತಿದೆಯೆಂದು ಹೇಳಲಾಗುತ್ತಿದೆ. ಮಾಮೂಲಿ ಜಿಹಾದಿ ಸಂಘಟನೆ ಲಷ್ಕರೆ ತೊಯ್ಬಾ ನುಸುಳುವಿಕೆ ಪ್ರಯತ್ನಗಳು ಹೆಚ್ಚುತ್ತಿದೆಯಲ್ಲದೇ ತಾಲಿಬಾನ್ ಉಪಸ್ಥಿತಿ ಕೂಡ ಹೊಸ ಬೆದರಿಕೆಯಾಗಿ ಪರಿಣಮಿಸಿದೆ.
ಮುಂದಿನ 15ರಿಂದ 20 ದಿನಗಳಲ್ಲಿ ನುಸುಳುವಿಕೆ ಪ್ರಯತ್ನಗಳ ಮಾತುಕತೆಯನ್ನು ಗುಪ್ತಚರ ಇಲಾಖೆ ಕದ್ದಾಲಿಸಿದ ಬಳಿಕ ಈ ಬೆಳವಣಿಗೆಗಳ ಬಗ್ಗೆ ಬಿಎಸ್‌ಎಫ್ ಮತ್ತು ಸೇನೆಗೆ ಕಟ್ಟೆಚ್ಚರ ವಹಿಸಲಾಗಿದೆಯೆಂದು ಉನ್ನತ ಮೂಲಗಳು ತಿಳಿಸಿವೆ.ತಾಲಿಬಾನ್ ಭಾರತದೊಳಕ್ಕೆ ನುಸುಳುವಲ್ಲಿ ಇನ್ನೂ ಯಶಸ್ವಿಯಾಗಿಲ್ಲವಾದರೂ, ಮುಂದಿನ ದಿನಗಳು ಸವಾಲಾಗಿ ಪರಿಣಮಿಸಲಿದ್ದು, ಚಳಿಗಾಲಕ್ಕೆ ಮುಂಚಿತವಾಗಿ ನುಸುಳುವ ಪ್ರಯತ್ನ ನಡೆಯುತ್ತಿದೆಂದು ನಿರೀಕ್ಷಿಸಲಾಗಿದೆಯೆಂದು ಹಿರಿಯ ಅಧಿಕಾರಿ ತಿಳಿಸಿದರು.
ಇದರೊಂದಿಗೆ ಅಮೆರಿಕ, ಬ್ರಿಟನ್, ರಷ್ಯಾ, ವಿಶ್ವಸಂಸ್ಥೆ, ಯಾರು ಏನೇ ಹೇಳಿದರೂ ಪಾಕಿಸ್ತಾನಿ ಆಡಳಿತವು ತನ್ನ ಷಡ್ಯಂತ್ರವನ್ನು ಬಿಡುವುದು ಸಾಧ್ಯವೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.