ಆಸ್ಟ್ರೇಲಿಯದಲ್ಲಿ ಜನಾಂಗೀಯ ದ್ವೇಷದ ಹಲ್ಲೆಗಳು ಮುಗಿಯದ ಕಥೆಯಾಗಿದ್ದು, ಎರಡು ವಾರಗಳ ಕೆಳಗೆ ಕಾಣೆಯಾಗಿದ್ದ ಭಾರತದ ಉದ್ಯಮಿ ಪ್ರದೀಪ್ ಕುಮಾರ್ ಶವವು ಆಸ್ಟ್ರೇಲಿಯದ ವಿಕ್ಟೋರಿಯ ನಗರದಲ್ಲಿ ಪತ್ತೆಯಾಗಿದೆ. ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಭಾರತೀಯ ಅಥವಾ ಏಷ್ಯಾದ ಚಹರೆಯಿರುವ ವ್ಯಕ್ತಿಯೊಬ್ಬರು ಜಗಳದಲ್ಲಿ ಇರಿತಕ್ಕೊಳಗಾಗಿದ್ದಾರೆ.
ವಾಯವ್ಯ ವಿಕ್ಟೋರಿಯದ ಮಿಲ್ಡುರಾದಲ್ಲಿ ಹತ್ಯೆಯಾದ ಕುಮಾರ್ ಅವರ ವ್ಯವಹಾರ ಸಂಪರ್ಕಗಳ ಬಗ್ಗೆ ಪತ್ತೆದಾರರು ತನಿಖೆ ನಡೆಸುತ್ತಿದ್ದಾರೆ.ಮಿಲ್ಡುರಾ ಲೈಬ್ರರಿಯಲ್ಲಿ ಎರಡು ವಾರಗಳ ಕೆಳಗೆ ವ್ಯವಹಾರ ಒಪ್ಪಂದದ ಸಭೆಗೆ ತೆರಳಿದ್ದ ಕುಮಾರ್ ಆಗಿನಿಂದ ನಾಪತ್ತೆಯಾಗಿದ್ದಾಂದು ಹೋಮಿಸೈಡ್ ದಳದ ಪತ್ತೆದಾರ ತಿಳಿಸಿದ್ದರು. ಕುಮಾರ್ ಅವರು ಯಾರನ್ನೋ ಭೇಟಿಯಾಗಲು ಇಲ್ಲಿಗೆ ಬಂದಿದ್ದರು. ಅವರ ಪಾಲಿಗೆ ಅದು ದೊಡ್ಡ ವ್ಯವಹಾರವಾಗಿದ್ದು, ಅವರನ್ನು ಮೋಸದಿಂದ ಹತ್ಯೆಮಾಡಲಾಗಿದೆಯೆಂದು ಪತ್ತೆದಾರ ಇಡ್ಲೇಸ್ ತಿಳಿಸಿದ್ದಾರೆ.
ಕುಮಾರ್ ಅವರ ಬ್ಲೂ ಕೊಮ್ಮೊಡೋರ್ ಕಾರು ಮಿಲ್ಡುರಾ ರೈಲ್ವೆ ನಿಲ್ದಾಣದ ಹೊರಗೆ ಎರಡು ದಿನಗಳ ಕೆಳಗೆ ಪತ್ತೆಯಾಗಿತ್ತು. ಸ್ಥಳೀಯ ಭಾರತೀಯ ಸಮುದಾಯದಲ್ಲಿ ಕುಮಾರ್ ಒಳ್ಳೆಯ ಸಂಪರ್ಕ ಹೊಂದಿದ್ದು, ತಮ್ಮ ಕಾರ್ಮಿಕರಿಗೆ ಕೆಲಸ, ವಸತಿ ಮತ್ತು ಆಹಾರ ನೀಡುತ್ತಿದ್ದರಿಂದ ಜನಪ್ರಿಯರಾಗಿದ್ದರು.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಭಾರತೀಯ ಅಥವಾ ಏಷ್ಯಾ ಚಹರೆ ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಮೆಲ್ಬೋರ್ನ್ ಉಪನಗರ ಅಬೋಟ್ಸ್‌ಫೋರ್ಡ್‌ನಲ್ಲಿ ಇರಿಯಲಾಗಿದೆ. ಸುಮಾರು 10 ಜನರು ಕಲೆತಿದ್ದಾಗ ಜಗಳವುಂಟಾಗಿ ಈ ವ್ಯಕ್ತಿಯನ್ನು ಇರಿಯಲಾಯಿತೆಂದು ಹೇಳಲಾಗಿದೆ.