ಇಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ಒಳಾಡಳಿತ ಸಚಿವಾಲಯದ ಬಳಿ ಗುರುವಾರ ಬೆಳಿಗ್ಗೆ ಭಾರತೀಯ ಕಾಲಮಾನ 9.30ಕ್ಕೆ ಭಾರೀ ಸ್ಫೋಟ ಸಂಭವಿಸಿದ್ದು, ಸುಮಾರು 12 ಜನರು ಸ್ಫೋಟಕ್ಕೆ ಬಲಿಯಾಗಿದ್ದಾರೆಂದು ಶಂಕಿಸಲಾಗಿದೆ. ಭಾರೀ ಸ್ಫೋಟದ ಸದ್ದು ಕೇಳಿಬಂತು ಮತ್ತು ಸ್ಫೋಟ ನಡೆದ ಸ್ಥಳದಿಂದ ದಟ್ಟವಾದ ಹೊಗೆ ಕಂಡುಬಂತೆಂದು ಎಪಿ ವರದಿಗಾರರು ತಿಳಿಸಿದ್ದಾರೆ.
ಭಾರತದ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಯುತ್ತಿರುವುದು ಇದು ಎರಡನೇ ಬಾರಿಯೆಂದು ಹೇಳಲಾಗಿದೆ. ಕಳೆದ ಬಾರಿ ಸ್ಫೋಟ ಸಂಭವಿಸಿದ ನಂತರ ಭಾರತ ಸರ್ಕಾರ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಬಿಗಿ ಭದ್ರತೆಯನ್ನು ನಿಯೋಜಿಸಿತ್ತು. ಸ್ಪೋಟದಿಂದ ಎರಡು ವಾಹನಗಳಿಗೆ ತೀವ್ರ ಹಾನಿಯಾಗಿದ್ದು, ಇನ್ನೊಂದು ವಾಹನಕ್ಕೆ ವಿಶ್ವಸಂಸ್ಥೆಯ ಲೇಬಲ್ ಹಾಕಿತ್ತೆಂದು ಹೇಳಲಾಗಿದೆ. ಸ್ಫೋಟದ ರಭಸಕ್ಕೆ ಸುತ್ತಮುತ್ತಲಿನ ಕಿಟಕಿ ಗಾಜುಗಳು ಅದುರಿಹೋಗಿವೆ. ಸ್ಫೋಟವು ಆತ್ಮಾಹುತಿ ಮಾನವ ಬಾಂಬರ್‌ಗಳ ಕೈವಾಡವಿರಬಹುದೆಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.
ಆದರೆ ಆತ್ಮಾಹುತಿ ಬಾಂಬರ್‌ಗಳು ಬಿಗಿ ಭದ್ರತೆಯನ್ನು ಭೇದಿಸಿ ಹೇಗೆ ನುಗ್ಗಿದರೆಂದು ತಿಳಿದುಬಂದಿಲ್ಲ. ಸ್ಫೋಟದಲ್ಲಿ ಭಾರತೀಯರು ಅಸುನೀಗಿದ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಕಾವಲುಗಾರನೊಬ್ಬನಿಗೆ ಗಾಯವಾಗಿದೆಯೆಂದು ವರದಿಯಾಗಿದೆ.
ಕಾಬೂಲ್‌ನಲ್ಲಿ ಆತ್ಮಾಹುತಿ ಬಾಂಬರ್‌ಗಳು ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಬಾರಿ ಸ್ಫೋಟಗಳನ್ನು ನಡೆಸಿದ್ದು, ಈ ದಾಳಿಗಳು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಿಲಿಟರಿ ಪಡೆಗಳು ಅಥವಾ ಸರ್ಕಾರಿ ನೆಲೆಗಳ ಮೇಲೆ ಗುರಿಇರಿಸಲಾಗುತ್ತಿದೆ.