ಬಲವಂತದಿಂದ ಮದುವೆಗಳ ವಿರುದ್ಧ ಕ್ರಮ ಕೈಗೊಳ್ಳಲು ಬ್ರಿಟನ್ ಸರ್ಕಾರಕ್ಕೆ ಪ್ರೇರೇಪಿಸಿದ ಸಿಖ್ ಮಹಿಳೆಯೊಬ್ಬಳ ಆಂದೋಳನಕ್ಕೆ ಪ್ರತಿಷ್ಠಿತ ಪ್ರಶಸ್ತಿ ದಕ್ಕಿದೆ.
ಇಷ್ಟವಿಲ್ಲದಿದ್ದರೂ ಬಲವಂತದ ವಿವಾಹದಿಂದ ಜನರನ್ನು ಮುಕ್ತಗೊಳಿಸಲು ದತ್ತಿಸಂಸ್ಥೆಯೊಂದನ್ನು ನಡೆಸುತ್ತಿದ್ದ ಜಸ್ವೀಂದರ್ ಸಂಘೇರಾ ಅವರಿಗೆ ಮಂಗಳವಾರ ರಾತ್ರಿ ಗಣ್ಯಾತಿಗಣ್ಯರು ನೆರೆದಿದ್ದ ಭವ್ಯ ಸಮಾರಂಭದಲ್ಲಿ ಪ್ರೈಡ್ ಆಫ್ ಬ್ರಿಟನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಲಾತ್ಕಾರದ ಮದುವೆಯ ಮುಷ್ಠಿಯಿಂದ ಸ್ವತಃ ಸಂಘೇರಾ ಅವರೇ ಪಾರಾಗಿ ಬಂದಿದ್ದಾರೆ. ಸಂಘೇರಾ ಪೋಷಕರು ಆಕೆಯನ್ನು ಬಲವಂತವಾಗಿ ಇಷ್ಟವಿಲ್ಲದವನ ಜತೆ ಮದುವೆ ಮಾಡಿಸಲು ನಾನಾ ರೀತಿಯ ಹಿಂಸೆಗೆ ಗುರಿಮಾಡಿದರು. ಅವೆಲ್ಲವನ್ನೂ ಸೈರಿಸಿಕೊಂಡು ಆಕೆ ಬದುಕುಳಿದ್ದಳು. ಬಲಾತ್ಕಾರದ ಮದುವೆಯಿಂದ ಪಾರಾಗಲು ಆಕೆಯ ಹಿರಿಯ ಸೋದರಿ ರೊಬಿನಾ 1983ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಇದರಿಂದ ಮನಕಲಕಿದ ಸಂಘೇರಾ 1993ರಲ್ಲಿ ಡರ್ಬಿಯಲ್ಲಿ ಕರ್ಮ ನಿರ್ವಾಣಾ ದತ್ತಿಸಂಸ್ಥೆಯನ್ನು ಸ್ಥಾಪಿಸಿ ಬಲವಂತದ ಮದುವೆಗಳು ಮತ್ತು ಗೌರವ ಹಿಂಸೆಗಳ ವಿರುದ್ಧ ಸಿಡಿದೆದ್ದರು.ಬಲಾತ್ಕಾರದ ಮದುವೆಗಳ ವಿರುದ್ಧ ಬ್ರಿಟನ್ ರಾಜಕಾರಣಿಗಳನ್ನು ಒಪ್ಪಿಸಲು ಸಂಘೇರಾ ಕಾರಣಕರ್ತರಾಗಿದ್ದು, ಬ್ರಿಟನ್ ವಿದೇಶಾಂಗ ಸಚಿವಾಲಯ ಈಗ ಬಲಾತ್ಕಾರದ ಮದುವೆ ನಿವಾರಣೆ ಘಟಕ ಹೊಂದಿದೆ. ದುರ್ದೈವಿಗಳಿಂದ ಸುಮಾರು ವರ್ಷಕ್ಕೆ 5000 ಕರೆಗಳನ್ನು ಈ ಘಟಕ ಸ್ವೀಕರಿಸುತ್ತಿದೆಯೆಂದು ಕರ್ಮ ನಿರ್ವಾಣ ವಕ್ತಾರೆ ಹೇಳಿದ್ದಾರೆ.
ಎಫ್‌ಎಂಯು ನಿಭಾಯಿಸುತ್ತಿರುವ ಶೇ.65ರಷ್ಟು ಪಾಕಿಸ್ತಾನದ ಮುಸ್ಲಿಂರನ್ನು ಒಳಗೊಂಡಿದೆ. ಶೇ.30 ಅಪ್ರಾಪ್ತ ವಯಸ್ಕರು ಮತ್ತು ಶೇ.15 ಬಾಲಕರು ಅಥವಾ ಪುರುಷರು. ಬಲಾತ್ಕಾರದ ಮದುವೆಗಳು ಮಾನವ ಹಕ್ಕುಗಳ ಉಲ್ಲಂಘನೆಯಷ್ಟೇ ಅಲ್ಲ, ಅತ್ಯಾಚಾರ, ಸೆರೆ ಮತ್ತು ಗೌರವಾಧಾರಿತ ಇಜ್ಜತ್ ಹಿಂಸಾಚಾರದ ಹತ್ಯೆಗಳ ಜತೆ ನಂಟು ಹೊಂದಿದೆ.