ಇಸ್ಲಾಮಾಬಾದ್, ಶುಕ್ರವಾರ, 9 ಅಕ್ಟೋಬರ್ 2009( 11:40 IST )
ದಕ್ಷಿಣ ಏಷ್ಯಾ ವಲಯದಲ್ಲಿ ನಿರಂತರ ಶಾಂತಿಗೆ ಕಾಶ್ಮೀರ ವಿವಾದದ ಪರಿಹಾರ ಅವಶ್ಯಕವೆಂದು ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಗುರುವಾರ ತಿಳಿಸಿದ್ದಾರೆ. 2005ರ ಭೂಕಂಪದಲ್ಲಿ ಸಾವಪ್ಪಿದ ಸಾವಿರಾರು ಜನರ ನೆನಪಿಗಾಗಿ ಮುಜಫರಾಬಾದ್‌ನಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರ ವಿವಾದ ಪರಿಹಾರವು ಪಾಕಿಸ್ತಾನ ಪೀಪಲ್ಸ್ ಪಕ್ಷದ ವಿದೇಶಾಂಗ ನೀತಿಗಳ ಅಡಿಗಲ್ಲಾಗಿದೆಯೆಂದು ಗಿಲಾನಿ ತಿಳಿಸಿದರು.
ಪ್ರಸಕ್ತ ಸರ್ಕಾರವು ಈ ನಿಲುವಿಗೆ ಬದ್ಧವಾಗಿದ್ದು, ಕಾಶ್ಮೀರದ ಜನರಿಗೆ ರಾಜಕೀಯ, ನೈತಿಕ ಮತ್ತು ರಾಜತಾಂತ್ರಿಕ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆಂದು ಅವರು ಹೇಳಿದರು. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಜಮ್ಮುಕಾಶ್ಮೀರದ ಜನರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ನಾವು ಒಂದಾಗಿದ್ದು ಹಾಗೇ ಉಳಿಯುವುದಾಗಿ ಗಿಲಾನಿ ತಿಳಿಸಿದರು.ಗಿಲ್ಗಿಟ್-ಬಾಲ್ಟಿಸ್ತಾನ್ ಎಂದು ಮರುನಾಮಕರಣ ಪಡೆದ ಉತ್ತರದ ಪ್ರದೇಶಗಳಿಗೆ ಆಂತರಿಕ ಸ್ವಾಯತ್ತತೆ ನೀಡುವ ಸರ್ಕಾರದ ನಿರ್ಧಾರದಿಂದ ಕಾಶ್ಮೀರ ವಿವಾದ ಕುರಿತು ಪಾಕಿಸ್ತಾನದ ನಿಲುವಿನಲ್ಲಿ ನಕಾರಾತ್ಮಕ ಪರಿಣಾಮ ಬೀರುವುದಿಲ್ಲವೆಂದು ಅವರು ತಿಳಿಸಿದರು.
ಪಾಕಿಸ್ತಾನದ ಸಂಸ್ಥಾಪಕ ಮೊಹಮದ್ ಅಲಿ ಜಿನ್ನಾ ಅವರು ಕಾಶ್ಮೀರವನ್ನು ದೇಶದ ಗಂಟಲಿನ ನಾಳವೆಂದು ಬಣ್ಣಿಸಿದ್ದರು. ಪಿಪಿಪಿ ಕೂಡ ಇದೇ ನಿಲುವನ್ನು ಅಳವಡಿಸಿಕೊಂಡಿದೆಯೆಂದು ಗಿಲಾನಿ ಹೇಳಿದರು. ಕಾಶ್ಮೀರಿ ಜನತೆಯ ಆಶೋತ್ತರಗಳಿಗೆ ಅನುಗುಣವಾಗಿ ಮತ್ತು ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಗುಣವಾಗಿ ಕಾಶ್ಮೀರ ವಿವಾದ ಪರಿಹಾರಕ್ಕೆ ಪಾಕಿಸ್ತಾನ ಬಯಸುತ್ತದೆಂದು ಗಿಲಾನಿ ಹೇಳಿದರು.