ಪ್ರಕ್ಷುಬ್ಧಪೀಡಿತ ಪಾಕಿಸ್ತಾನದ ವಾಯವ್ಯ ನಗರ ಪೇಶಾವರದಲ್ಲಿ ಭೀಕರ ಬಾಂಬ್ ಸ್ಫೋಟಕ್ಕೆ 30 ಜನರು ಅಸುನೀಗಿದ ಘಟನೆ ನಡೆದಿದೆ. ತೀವ್ರ ಜನಸಂದಣಿಯ ಬಜಾರ್‌ನಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಸುಮಾರು 100 ಜನರು ಗಾಯಗೊಂಡಿದ್ದಾರೆಂದು ಪ್ರಾಂತೀಯ ಮಾಹಿತಿ ಸಚಿವ ಮಿಯಾನ್ ಇಫ್ತಿಕರ್ ಹುಸೇನ್ ತಿಳಿಸಿದ್ದಾರೆ.
ನಗರದ ಮುಖ್ಯ ಕೈಬರ್ ಬಜಾರ್‌ಗೆ ಹತ್ತಿರದ ಶಾಪಿಂಗ್ ಪ್ರದೇಶದಲ್ಲಿ ಸ್ಫೋಟ ಅಪ್ಪಳಿಸಿದ್ದು, ಆಂಬ್ಯುಲೆನ್ಸ್‌ಗಳು ಸ್ಫೋಟದ ಸ್ಥಳಕ್ಕೆ ಧಾವಿಸಿದವೆಂದು ಸ್ಥಳೀಯ ಪೊಲೀಸ್ ಅಧಿಕಾರಿ ಅಸ್ಗರ್ ಹುಸೇನ್ ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಬಾಂಬನ್ನು ಹುದುಗಿಸಿಡಲಾಗಿತ್ತೆಂದು ಶಂಕಿಸಲಾಗಿದೆ. ಬಾಂಬನ್ನು ದೂರನಿಯಂತ್ರಕ ಉಪಕರಣದಿಂದ ನಿಯಂತ್ರಿಸಲಾಗಿತ್ತೇ ಅಥವಾ ಆತ್ಮಾಹುತಿ ದಾಳಿಯೇ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಪೇಶಾವರವು ವಾಯವ್ಯದಲ್ಲಿ ಮುಖ್ಯನಗರವಾಗಿದ್ದು, ಪಾಕಿಸ್ತಾನದ ವಿರುದ್ಧ ಹಿಂಸಾತ್ಮಕ ಹೋರಾಟ ಹೂಡಿರುವ ತಾಲಿಬಾನ್ ಮತ್ತು ಅಲ್ ಖಾಯಿದಾ ಜತೆ ನಂಟು ಹೊಂದಿದ ಭಯೋತ್ಪಾದಕರಿಗೆ ಆಗಾಗ್ಗೆ ಗುರಿಯಾಗುತ್ತಿದೆ. ಪೇಶಾವರದಲ್ಲಿ ಕಳೆದ ಎರಡು ವಾರಗಳಲ್ಲಿ ನಡೆಯುತ್ತಿರುವ ಎರಡನೇ ದಾಳಿ ಇದಾಗಿದ್ದು, ಮಿಲಿಟರಿ ಕಾರ್ಯಾಚರಣೆ ನಡುವೆಯೂ ಭಯೋತ್ಪಾದಕರು ಪಾಕಿಸ್ತಾನದ ನಗರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.