ವಾಷಿಂಗ್ಟನ್, ಗುರುವಾರ, 15 ಅಕ್ಟೋಬರ್ 2009( 16:53 IST )
2012ರಲ್ಲಿ ಪ್ರಳಯ ಸಂಭವಿಸಿ ಜಗತ್ತು ಅಂತ್ಯಕಾಣುತ್ತದೆಂದು ಪ್ರಾಚೀನ ಕಾಲಜ್ಞಾನಿಗಳ ಭವಿಷ್ಯವಾಣಿ ಕೇವಲ ಹುಸಿಯಾಗಿದ್ದು, ಈ ಒಳಸಂಚಿನ ಸಿದ್ಧಾಂತ ಸೃಷ್ಟಿಸಿದ ಪ್ರವರ್ತಕರಿಗೆ ಭಾರೀ ಲಾಭ ಮಾಡಿಕೊಳ್ಳಲು ನೆರವಾಗುತ್ತಿದೆಯೆಂದು ನಾಸಾ ವಿಜ್ಞಾನಿಯೊಬ್ಬರು ಹೇಳಿದ್ದಾರೆ.
2012ರ ಡಿಸೆಂಬರ್ 21 ರಂದು ಭೂಗ್ರಹದ ಅವಸಾನ ಎಂದು ಇಂಟರ್‌ನೆಟ್‌ನಲ್ಲಿ ವ್ಯಾಪಕ ಪ್ರಚಾರಕ್ಕೆ ವಿಜ್ಞಾನಿಗಳ ಪ್ರತಿಕ್ರಿಯೆ ಮತ್ತು ಈ ಭವಿಷ್ಯವಾಣಿಗೆ ನಾಸಾ ವಿಜ್ಞಾನಿ ಡೇವಿಡ್ ಮಾರಿಸನ್ ನೀಡಿದ ಸಂಕ್ಷಿಪ್ತ ಸಾರಾಂಶದಿಂದ ಇಡೀ ವಿದ್ಯಮಾನವು ಹುಸಿಯಲ್ಲದೇ ಮತ್ತೇನೂ ಅಲ್ಲವೆಂದು ನಿರ್ಧರಿಸಲಾಗಿದೆ.ಕೆಲವು ತಿಂಗಳುಗಳಿಂದ ಜಗತ್ತು 2012ರಲ್ಲಿ ಅವಸಾನ ಹೊಂದುತ್ತದೆಂದು ಇಂಟರ್‌ನೆಟ್‌ನಲ್ಲಿ ವ್ಯಾಪಕ ಪ್ರಚಾರದಿಂದ ಸಾರ್ವಜನಿಕರು ನಾಸಾ ಸಂಸ್ಥೆಗೆ ಮತ್ತು ಅನೇಕ ಖಗೋಳವಿಜ್ಞಾನಿಗಳಿಗೆ ಪತ್ರಗಳನ್ನು, ಈ ಮೇಲ್‌ಗಳನ್ನು ಕಳಿಸಿ ಈ ಬೆಳವಣಿಗೆ ಕುರಿತು ಆತಂಕ ವ್ಯಕ್ತಪಡಿಸಿದ್ದರು.
ಜಗತ್ತಿನ ಅವಸಾನಕ್ಕೆ ಘಟಿಸುವ ವಿವಿಧ ಘಟನೆಗಳನ್ನು ಉಲ್ಲೇಖಿಸಲಾಗಿದ್ದು, ನಿಬಿರು ಎಂದು ಕರೆಯುವ ಕಾಲ್ಪನಿಕ ಗ್ರಹದ ಜತೆ ಘರ್ಷಣೆ, ಸೂರ್ಯನ ಮೇಲ್ಮೈನಲ್ಲಿ ಮಾರಕ ಚಟುವಟಿಕೆಗಳಿಂದ ಭೂಮಿಯ ವಿನಾಶ. ಆಕಾಶಗಂಗೆಯ ಕೇಂದ್ರದ ಜತೆ ಸಂಯೋಗ ಮುಂತಾದ ವಿದ್ಯಮಾನಗಳು ಘಟಿಸಿ ಭೂಮಿ ಅವಸಾನ ಅಂಚಿಗೆ ತಲುಪುತ್ತೆದಂದು ಹೇಳಲಾಗುತ್ತಿದೆ.ಸೌರಮಂಡಲ ಕುರಿತು ತಜ್ಞರಾಗಿರುವ ಡಾ.ಮೋರಿಸನ್ ನಾಸಾದ ಸಾರ್ವಜನಿಕ ವಿಜ್ಞಾನಿಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
2012ರ ಭೂಮಿಯ ಅವಸಾನ ಕುರಿತು ಅವರು ಅನೇಕ ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಆ ಕುರಿತು ಸಮಗ್ರ ತನಿಖೆಗೆ ನಿರ್ಧರಿಸಿದರು. ಅವರ ತನಿಖೆಯಲ್ಲಿ ವಿಜ್ಞಾನದ ಕಾಲ್ಪನಿಕ ಚಿತ್ರ '2012' ನವೆಂಬರ್‌ನಲ್ಲಿ ಬಿಡುಗಡೆಯಾಗುತ್ತಿದ್ದು, ಅದರ ವಿತರಕರು ಇಂಟರ್‌ನೆಟ್‌ನಲ್ಲಿ ಸೃಷ್ಟಿಸಿದ ಭಯವೆಂಬ ಬೆಂಕಿಯ ಜ್ವಾಲೆಗಳಿಗೆ ತುಪ್ಪ ಸುರಿಯುತ್ತಿದ್ದಾರೆಂದು ಪತ್ತೆಯಾಗಿದೆ.
ನಕಲಿ ವಿಜ್ಞಾನ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ವೆಬ್‌ನಲ್ಲಿ '2012' ರ ಶೋಧ ನಡೆಸಲು ಪ್ರೇರೇಪಿಸುತ್ತಿದ್ದು,ಎಲ್ಲವೂ ತಮ್ಮ ಚಿತ್ರಕ್ಕೆ ಪ್ರಸಾರ ಪಡೆಯುವ ದುರುದ್ದೇಶದಿಂದ ಕೂಡಿದೆ. 2012 ಸಿದ್ಧಾಂತದ ಆಧಾರದ ಮೇಲಿರುವ ಅನೇಕ ತಾಣಗಳು ತಪ್ಪುತಿಳಿವಳಿಕೆಯಿಂದ ಕೂಡಿದ್ದು, ಭೂಮಿಯ ಅವಸಾನದ ಬಗ್ಗೆ ಪುಸ್ತಕಗಳನ್ನು ಬರೆದವರು ಕೂಡ ಸೃಷ್ಟಿಸಿದ್ದೆಂದು ತಿಳಿದುಬಂದಿದೆ.