ಮುಂಬೈ ದಾಳಿಗಳ ಕಾರಣಕರ್ತರಿಗೆ ಶಿಕ್ಷೆ ವಿಧಿಸಲು ಪಾಕಿಸ್ತಾನ ಕೈಗೊಂಡ ಕ್ರಮಗಳ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರೂ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ಗೆ ಮಾತ್ರ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ಹೋರಾಟ ಸಂತೃಪ್ತಿ ತಂದಿದೆ. ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಸರ್ಕಾರದ ಬದ್ಧತೆ ಬಗ್ಗೆ ತಮಗೆ ಅತೀವ ಸಂತಸವಾಗಿದ್ದಾಗಿ ಅವರು ಹೇಳಿದ್ದಾರೆ.
ತಾಲಿಬಾನ್ ಸ್ವಾಟ್ ಕಣಿವೆಯನ್ನು ಆಕ್ರಮಿಸಿಕೊಂಡಾಗ, ಭಯೋತ್ಪಾದಕ ಶಕ್ತಿಗಳ ವಿರುದ್ಧ ಸಮರದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ಬದ್ಧತೆ ಕುರಿತು ಗಂಭೀರ ಪ್ರಶ್ನೆಯನ್ನು ಕ್ಲಿಂಟನ್ ಎತ್ತಿದ್ದರು.
ಆದರೆ ಈಗ ಕ್ಲಿಂಟನ್ ಹೇಳಿಕೆ ತದ್ವಿರುದ್ಧವಾಗಿದ್ದು, ಮುಂಬೈ ದಾಳಿಯ ಭಯೋತ್ಪಾದಕ ವಿರುದ್ದ ಪಾಕಿಸ್ತಾನ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವ ನಡುವೆಯೂ ಅವರ ಹೇಳಿಕೆ ಹೊರಬಿದ್ದಿದೆ. ಕೆಲವು ತಿಂಗಳ ಹಿಂದೆ ಪಾಕಿಸ್ತಾನ ಉಗ್ರಗಾಮಿಗಳ ಹಿಡಿತಕ್ಕೆ ಸಿಗುವ ಅಪಾಯದಲ್ಲಿದೆಯೆಂದು ಕ್ಲಿಂಟನ್ ಹೇಳಿಕೆ ಕುರಿತು ಸಿಎನ್‌ಎನ್ ಸಂದರ್ಶನದಲ್ಲಿ ಕ್ಲಿಂಟನ್ ಅವರನ್ನು ಪ್ರಶ್ನಿಸಿದಾಗ, ಸರ್ಕಾರ ಮತ್ತು ಮಿಲಿಟರಿ ಎರಡರ ಬದ್ಧತೆಯಿಂದ ತಮಗೆ ತೃಪ್ತಿಯಾಗಿದೆಯೆಂದು ಹೇಳಿದರು.