ನ್ಯೂಯಾರ್ಕ್, ಭಾನುವಾರ, 18 ಅಕ್ಟೋಬರ್ 2009( 10:44 IST )
ಆಫ್ರಿಕನ್ ರಾಷ್ಟ್ರಗಳ ಜತೆಗಿನ ಭಾರತದ ಸಂಬಂಧವು ಸ್ವತಂತ್ರವಾಗಿದ್ದು, ಚೀನಾದ ಜತೆ ಯಾವುದೇ ಪೈಪೋಟಿ ನಡೆಸುತ್ತಿಲ್ಲ. ಆಫ್ರಿಕಾಕ್ಕೆ ಬೀಜಿಂಗ್ ಜತೆಗೆ ಸ್ಪರ್ಧೆ ನೀಡಬೇಕೆಂದು ಯಾವುದೇ ನೀತಿಗಳನ್ನು ಅನುಸರಿಸುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ತಿಳಿಸಿದ್ದಾರೆ.
ಚೀನಾವು ಆಫ್ರಿಕಾದ ಜತೆ ಸಂಬಂಧ ಹೊಂದಿರುವಂತೆ ಭಾರತವೂ ಆಫ್ರಿಕಾದ ಹಲವು ದೇಶಗಳ ಜತೆ ಸ್ವತಂತ್ರ ಸಂಬಂಧವನ್ನು ಹೊಂದಿದೆ ಎಂದು ನ್ಯೂಯಾರ್ಕ್‌ಗೆ ನೀಡಿದ ಮೊದಲ ಅಧಿಕೃತ ಭೇಟಿಯ ಸಂದರ್ಭದಲ್ಲಿ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ತರೂರ್ ಹೇಳಿದರು.
ಇಂತಹ ಸಂಬಂಧಗಳನ್ನು ಇತರ ರಾಷ್ಟ್ರದ ನಿಮಿತ್ತ ನೋಡುವುದರಿಂದ ಯಾವುದೇ ರಚನಾತ್ಮಕ ಲಾಭವಿಲ್ಲ ಎಂದು ಮತ್ತೂ ಮಾತು ಮುಂದುವರಿಸಿದ ಅವರು ತಿಳಿಸಿದರು.
ಆಫ್ರಿಕಾ ದೇಶಗಳ ಅಭಿವೃದ್ಧಿ ಮತ್ತು ಪುನರ್ ನಿರ್ಮಾಣಕ್ಕೆ ಕೇವಲ ಚೀನಾ ಮತ್ತು ಭಾರತಗಳ ಕೊಡುಗೆ ಮಾತ್ರ ಸಾಲದು, ಪಾಶ್ಚಾತ್ಯ ದೇಶಗಳೂ ಪಾಲ್ಗೊಳ್ಳಬೇಕೆಂದು ಕರೆ ನೀಡಿದ ಅವರು, 'ಇಲ್ಲಿ ಪೈಪೋಟಿ ಎನ್ನುವುದು ವಿಚಾರವಲ್ಲ' ಎಂದರು.
ಆಫ್ರಿಕಾದಲ್ಲಿ ನಾವೇನು ಮಾಡಬೇಕೋ ಅದನ್ನೇ ಮಾಡುತ್ತಿದ್ದೇವೆ. ಅದು ಸರಿಯಾಗಿದೆ ಎಂದು ನಾವು ಅಂದುಕೊಂಡು ನಾವು ತೊಡಗಿಸಿಕೊಂಡಿದ್ದೇವೆ. ಭಾರತವು ತನ್ನ ಅಮೂಲ್ಯ ಸೇವೆಯನ್ನು ಮಾಡಲು ಆಫ್ರಿಕಾವು ಸೂಕ್ತ ಎಂದು ಕಂಡುಕೊಂಡಿದೆ ಎಂದು ಈ ವಾರದ ಲಿಬೇರಿಯಾ ಪ್ರವಾಸದ ನಂತರ ಪಶ್ಚಿಮ ಆಫ್ರಿಕಾದ ದೇಶ ಬೆನಿನ್‌ಗೆ ಪ್ರಯಾಣ ಬೆಳೆಸಲಿರುವ ತರೂರ್ ತಿಳಿಸಿದ್ದಾರೆ.
ಆಫ್ರಿಕಾದಲ್ಲಿ ತನ್ನ ಖಾಸಗಿ ಕ್ಷೇತ್ರವನ್ನು ಮುನ್ನಡೆಸುವ ನೀತಿ ಭಾರತ ಸರಕಾರದ್ದು. ಚೀನಾವು ಈಗಾಗಲೇ ಅಲ್ಲಿ ಮೂಲಭೂತ ಸೌಕರ್ಯಗಳ ಕುರಿತಾಗಿ ಪ್ರಮುಖ ಪಾತ್ರವಹಿಸುತ್ತಿದೆ. ತರೂರ್ ಕೈಗೊಂಡಿರುವ ಆಫ್ರಿಕಾ ದೇಶಗಳ ಪ್ರವಾಸದಲ್ಲಿ ಉದ್ಯಮ ಕುರಿತಾದ ಆಶಯಗಳಿವೆ ಎಂದು ಮೂಲಗಳು ಹೇಳಿವೆ.