ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನರಹಂತಕನ ಬಿಡುಗಡೆಗೆ ಗಾಂಧಿ ತತ್ವಗಳೇ ಪ್ರೇರಣೆ: ಸ್ಕಾಟ್ಲೆಂಡ್
(Lockerbie bomber | Mahatma Gandhi | Scotland | Abdelbaset Ali Mohmet)
ನರಹಂತಕನ ಬಿಡುಗಡೆಗೆ ಗಾಂಧಿ ತತ್ವಗಳೇ ಪ್ರೇರಣೆ: ಸ್ಕಾಟ್ಲೆಂಡ್
ಲಂಡನ್, ಭಾನುವಾರ, 18 ಅಕ್ಟೋಬರ್ 2009( 15:52 IST )
270 ಅಮಾಯಕರ ಸಾವಿಗೆ ಕಾರಣನಾಗಿದ್ದ ಅಬ್ದೆಲ್‌ಬಾಸೆಟ್ ಆಲಿ ಮೊಹ್ಮೇತ್ ಆಲ್-ಮೆಗ್ರಾಹಿ ಎಂಬಾತನ ಬಿಡುಗಡೆಗೆ ಮಹಾತ್ಮ ಗಾಂಧಿಯವರ ಸಹಾನುಭೂತಿ ಮತ್ತು ಅಹಿಂಸೆಯ ತತ್ವಗಳೇ ಪ್ರೇರಣೆ ಎಂದು ಸ್ಕಾಟ್ಲೆಂಡ್ ಮುಖ್ಯಸ್ಥ ಅಲೆಕ್ಸ್ ಸಾಲ್ಮಂಡ್ ತಿಳಿಸಿದ್ದಾರೆ.
ಸಹಾನುಭೂತಿ ಆಧಾರದಲ್ಲಿ ಆರೋಪಿಯನ್ನು ಬಿಡುಗಡೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲು ಸ್ಕಾಟಿಷ್ ನ್ಯಾಯಿಕ ಕಾರ್ಯದರ್ಶಿ ಕೆನ್ನಿ ಮೆಕ್‌ಆಸ್ಕಿಲ್ ಅಧಿಕಾರ ಹೊಂದಿದ್ದರು ಎಂದು ಸ್ಕಾಟ್ಲೆಂಡ್‌ನ ಮೊದಲ ಸಚಿವ (ಸರಕಾರದ ಮುಖ್ಯಸ್ಥ) ಸಾಲ್ಮಂಡ್ ನುಡಿದರು.
PR
ಇತ್ತೀಚೆಗಷ್ಟೇ ಸ್ಕಾಟ್ಲೆಂಡ್‌ಗೆ ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ಭೇಟಿ ನೀಡಿರುವುದನ್ನು ಪತ್ರಿಕೋಗೋಷ್ಠಿಯಲ್ಲಿ ಸ್ಮರಿಸಿದ ಸಾಲ್ಮಂಡ್, 'ನನ್ನ ಅಜ್ಜನ ತತ್ವಗಳನ್ನು ಹೆಚ್ಚಾಗಿ ತಪ್ಪಗಿ ಅರ್ಥೈಸಿಕೊಳ್ಳಲಾಗಿದೆ. ಅವರ ಪ್ರತಿರೋಧ ವಿನಮ್ರವಾಗಿರಲಿಲ್ಲ, ಆದರೆ ಸಕ್ರಿಯವಾಗಿತ್ತು. ಅಹಿಂಸೆಗಾಗಿನ ಅವರ ಸಮರ್ಪಣಾ ಮನೋಭಾವವು ಸಾಮರ್ಥ್ಯವಾಗಿತ್ತೇ ವಿನಃ ದೌರ್ಬಲ್ಯವಾಗಿರಲಿಲ್ಲ ಎಂದು ಅರುಣ್ ಹೇಳಿದ್ದರು' ಎಂದರು.
ಕೆಲವು ಸಲ ಸಹಾನುಭೂತಿಯ ಮೂಲಕ ಪಾಪ ಫಲದ ಅವಧಿಯನ್ನು ಯಾರಾದರೂ ಮುರಿಯಬೇಕಾಗುತ್ತದೆ. ಆ ಕಾರ್ಯವನ್ನು ಕೆನ್ನಿ ಮೆಕ್‌ಆಸ್ಕಿಲ್ ಮಾಡಿದ್ದಾರೆ. ಅವರ ನಿರ್ಧಾರಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ ಎಂದು ಗಾಂಧೀಜಿಯವರ ತತ್ವಗಳ ರೀತಿಯಲ್ಲೇ ಸಾಲ್ಮಂಡ್ ಮಾತು ಮುಂದುವರಿಸಿದರು.
ಕೆಲ ಸಮಯದ ಹಿಂದೆ ಅರುಣ್ ಗಾಂಧಿಯವರನ್ನು ಭೇಟಿ ಮಾಡಿದ ನಂತರ ಸಾಲ್ಮಂಡ್‌ರವರು ಅಹಿಂಸೆ, ಶಾಂತಿ ಮತ್ತು ಸಾಮರಸ್ಯ ಕುರಿತಾದ ಸ್ಕಾಟಿಷ್ ಕೇಂದ್ರವೊಂದನ್ನು ತೆರೆಯುವ ಸಂಬಂಧದ ಪ್ರಸ್ತಾಪವನ್ನು ಪರಿಗಣಿಸುವುದಾಗಿ ಹೇಳಿದ್ದರು.
ಆತ 270 ಅಮಾಯಕರನ್ನು ಕೊಂದಿದ್ದ.. ಲಿಬಿಯಾದ ಗುಪ್ತಚರ ಅಧಿಕಾರಿ ಹಾಗೂ ಲಿಬಿಯನ್ ಅರಬ್ ಏರ್‌ಲೈನ್ಸ್‌ನ ಭದ್ರತಾ ಮುಖ್ಯಸ್ಥನಾಗಿದ್ದ ಅಬ್ದೆಲ್‌ಬಾಸೆಟ್ ಆಲಿ ಮೊಹ್ಮೇತ್ ಆಲ್-ಮೆಗ್ರಾಹಿ, 1988ರ ಡಿಸೆಂಬರ್ 21ರಂದು 'ಪಾನ್ ಆಮ್ ಫ್ಲೈಟ್ 103'ನ್ನು ಬಾಂಬ್ ಹಾಕಿ ಹೊಡೆದುರುಳಿಸಿದ್ದ.
ಈ ಘಟನೆಯಲ್ಲಿ 243 ಪ್ರಯಾಣಿಕರು, 16 ಸಿಬ್ಬಂದಿಗಳು ಹಾಗೂ ವಿಮಾನ ನಗರ ಪ್ರದೇಶದಲ್ಲಿ ಬಿದ್ದ ಕಾರಣ 11 ಮಂದಿ -- ಹೀಗೆ ಒಟ್ಟು 270 ಮಂದಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದ ಪ್ರಯಾಣಿಕರಲ್ಲಿ ಮೂವರು ಭಾರತೀಯರೂ ಸೇರಿದ್ದರು.
ಈ ವಿಮಾನವು ಲಾಕರ್‌ಬೀ ಪ್ರದೇಶದಲ್ಲಿ ಬಿದ್ದಿದ್ದ ಕಾರಣ ಘಟನೆಯನ್ನು 'ಲಾಕರ್‌ಬೀ ಬಾಂಬಿಂಗ್' ಎಂದೇ ಕರೆಯಲಾಗಿತ್ತು. ನಂತರ ಆರೋಪಿಯನ್ನು ಬಂಧಿಸಿದ್ದ ಸ್ಕಾಟ್ಲೆಂಡ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಆತ ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಮೂರು ತಿಂಗಳೊಳಗೆ ಸಾಯಲಿದ್ದಾನೆ ಎಂಬುದನ್ನು ಗಮನಿಸಿದ ಸ್ಕಾಟ್ಲೆಂಡ್, ಗಾಂಧಿ ತತ್ವಕ್ಕೆ ಮೊರೆ ಹೋಗುವ ಮೂಲಕ ಆತನನ್ನು ಆಗಸ್ಟ್‌ನಲ್ಲಿ ಲಿಬಿಯಾ ವಶಕ್ಕೆ ಒಪ್ಪಿಸಿತ್ತು.