ತಮ್ಮದೇ ಕುಟುಂಬದ ಯುವತಿಯೊಬ್ಬಳನ್ನು ಸತತ ಹಲವಾರು ವರ್ಷ ಭೋಗಿಸಿದ ಭಾರತೀಯ ಮೂಲದ ಮೂವರು ದುರುಳ ಸಂಬಂಧಿಕರು ಅಪರಾಧಿಗಳೆಂದು ಸಾಬೀತಾಗಿದ್ದು, ಇಂಗ್ಲೆಂಡ್ ನ್ಯಾಯಾಲಯವು ದೀರ್ಘಾವಧಿ ಕಠಿಣ ಶಿಕ್ಷೆ ವಿಧಿಸಿದೆ.
27ರ ಹರೆಯದ ಯುವತಿಯನ್ನು ಆಕೆಯ ಮಲತಂದೆ, ಮಲದೊಡ್ಡಪ್ಪ ಮತ್ತು ಭಾವ ಅತ್ಯಾಚಾರ ನಡೆಸಿದ್ದು ಕಾರ್ಡಿಫ್ ಕ್ರೌನ್ ನ್ಯಾಯಾಲಯದಲ್ಲಿ ರುಜುವಾತಾದ ಕಾರಣ ಶಿಕ್ಷೆ ಘೋಷಿಸಲಾಗಿದೆ. ಅಪರಾಧಿಗಳಲ್ಲಿ ಮಲತಂದೆ ಮತ್ತು ಮಲದೊಡ್ಡಪ್ಪ ಅಕ್ರಮ ವಲಸಿಗರಾಗಿದ್ದು, ಶಿಕ್ಷೆಯ ಅವಧಿ ಮುಗಿದ ನಂತರ ಅವರನ್ನು ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ.
55ರ ಹರೆಯದ ಮಲದೊಡ್ಡಪ್ಪ ಮತ್ತು 50ರ ಹರೆಯದ ಮಲತಂದೆಗೆ ಕ್ರಮವಾಗಿ 20 ಮತ್ತು 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. 27ರ ಹರೆಯದ ಆಕೆಯ ಭಾವನಿಗೆ 12 ವರ್ಷಗಳ ದಂಡನೆ ನೀಡಲಾಗಿದೆ.
ಬಾಲಕಿಯನ್ನೇ ಅತ್ಯಾಚಾರ ಮಾಡಿದ್ದರು.. ಯುವತಿಗೆ 14 ವರ್ಷವಿದ್ದಾಗ ಆಕೆಯ ಗರ್ಭಕ್ಕೆ ತಾನೇ ಕಾರಣವಾಗಿರುವುದನ್ನೂ ಮಲ ದೊಡ್ಡಪ್ಪ ವಿಚಾರಣೆ ಅವಧಿಯಲ್ಲಿ ಒಪ್ಪಿಕೊಂಡಿದ್ದಾನೆ. ಆತ ಏಳು ಬಾರಿ ಆಕೆಯನ್ನು ಅತ್ಯಾಚಾರ ಮಾಡಿದ್ದು, ಮೂರು ಬಾರಿ ಮಗುವಾಗಿದ್ದಾಗ ಅನುಚಿತ ವರ್ತನೆ ತೋರಿಸಿದ್ದ. ಅಲ್ಲದೆ ಹಲ್ಲೆ ಕೂಡ ನಡೆಸಿದ್ದ ಎಂದು ನ್ಯಾಯಾಲಯ ವಿವರಣೆ ನೀಡಿದೆ.
ಯುವತಿಗೆ ಆಕೆ ಬಾಲಕಿಯಾಗಿದ್ದಾಗಲೇ ಇವರು ಲೈಂಗಿಕ ಹಿಂಸೆ ನೀಡಲು ಆರಂಭಿಸಿದ್ದನ್ನು ನ್ಯಾಯಾಲಯ ಹೊರಗೆಳೆದಿತ್ತು. ಆಕೆ ಐದರ ಹರೆಯದ ಬಾಲಕಿಯಾಗಿದ್ದಾಗ ಮಲದೊಡ್ಡಪ್ಪ ಅತ್ಯಾಚಾರ ಮಾಡಿದ್ದ. 14ನೇ ವರ್ಷದಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಆ ಸಂದರ್ಭದಲ್ಲಿ ಆಕೆಯನ್ನು ಕೂಡಿ ಹಾಕಿದ್ದ ಕಾರಣ ಮನೆಗೆ ಭೇಟಿ ನೀಡುವವರಿಗೆ ಯಾವುದೇ ವಿಚಾರಗಳು ತಿಳಿಯುತ್ತಿರಲಿಲ್ಲ.
ಆಕೆ ಮೊದಲ ಬಾರಿ ವೈದ್ಯರನ್ನು ಭೇಟಿಯಾಗುವಾಗ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಮಗು ಹೆತ್ತ ನಂತರ ಅವರೇ ಗೊತ್ತುಪಡಿಸಿದ ಮದುವೆಗಾಗಿ ಭಾರತಕ್ಕೆ ಮರಳುವ ಮೊದಲು ಆಕೆಯ ಹೆತ್ತವರು ಸ್ನೇಹಿತರು ಮತ್ತು ನೆರೆ ಮನೆಯವರಲ್ಲಿ 'ಆ ಮಗು ನಮ್ಮದೇ' ಎಂದು ಹೇಳಿದ್ದರು ಎಂಬುದನ್ನು ನ್ಯಾಯಾಲಯ ಹೇಳಿದೆ.
ಸ್ವತಃ ತಾಯಿಯೇ ನಂಬಲಿಲ್ಲ.. ಆಕೆ 14ರ ಹರೆಯದಲ್ಲಿ ಶಾಲೆಗೆ ಹೋಗುತ್ತಿರುವಾಗ ದಿನೇ ದಿನೇ ಹೊಟ್ಟೆ ದೊಡ್ಡದಾಗುತ್ತಿರುವುದನ್ನು ಕಂಡು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆ ಗರ್ಭಿಣಿಯೆಂಬುದು ಬಹಿರಂಗವಾಗಿತ್ತು.
ಆ ಸಂದರ್ಭದಲ್ಲಿ ಆಕೆಯ ತಾಯಿ ಮುಖ ಮತ್ತು ಗುಪ್ತಾಂಗ ಹೊರತುಪಡಿಸಿ ಉಳಿದ ದೇಹದ ಭಾಗಗಳಿಗೆ ಕಠಿಣವಾಗಿ ದಂಡಿಸಿದ್ದಳು. ನಂತರ ಆಕೆಯನ್ನು ಮನೆಯಲ್ಲಿ ಬಚ್ಚಿಡಲಾಯಿತು. ಮನೆಗೆ ಬಂದವರು ಕೇಳಿದಾಗ, ಆಕೆಯನ್ನು ಭಾರತಕ್ಕೆ ವಾಪಸು ಕಳುಹಿಸಲಾಗಿದೆ ಎಂದು ಹೇಳಿದ್ದರೆಂದು ವಕೀಲೆ ಮರಿಯನ್ ಲೇವಿಸ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತನ್ನ ಈ ಸ್ಥಿತಿಗೆ ಕಾರಣರಾದವರು ಕುಟುಂಬಸ್ಥರೇ ಎಂಬುದನ್ನು ಹೇಳಿದರೂ ತಾಯಿ ನಂಬಲಿಲ್ಲ. ವೈದ್ಯರು ಪರೀಕ್ಷೆ ನಡೆಸಿ ಹೇಳಿದರೂ ಆಕೆ ನಂಬದೆ ನನ್ನ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದಳು. ಅಲ್ಲದೆ 'ಅವರು ಹಾಗೆ ಮಾಡುವವರಲ್ಲ. ಅವರೆಲ್ಲ ನಿನ್ನ ಸಂಬಂಧಿಕರು. ಖಂಡಿತ ಹಾಗೆ ಮಾಡಲಾರರು' ಎಂದು ತಾಯಿ ಸಮಜಾಯಿಷಿ ನೀಡುತ್ತಿದ್ದಳು ಎಂದು ಯುವತಿ ವಿವರಿಸಿದ್ದಾಳೆ.