ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನಾ ದಾಳಿಯಲ್ಲಿ ಪಾಕ್ ಕೈವಾಡ: ಇರಾನ್ (Iran Revolutionary Guards | Mahmoud Ahmadinejad | Pakistan | Sunni insurgent group | Jundollah)
ಭಾನುವಾರ ತಮ್ಮ ರೆವಲ್ಯುಷನರಿ ಗಾರ್ಡ್ಸ್ ಪಡೆಗಳ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನದ ಕೆಲವು ಭದ್ರತಾ ಏಜೆನ್ಸಿಗಳ ಕೈವಾಡವಿದೆ ಎಂದು ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿನೇಜಾದ್ ಅವರು ಆರೋಪಿಸಿದ್ದು, ಪಾಕಿಸ್ತಾನವು ಈ ಆರೋಪವನ್ನು ಅಲ್ಲಗಳೆದಿರುವುದರೊಂದಿಗೆ, ಪಾಕ್ ಉಗ್ರಗಾಮಿಗಳ ಕೈವಾಡವು ಭಾರತ, ಅಮೆರಿಕವಷ್ಟೇ ಅಲ್ಲದೆ ಉಳಿದೆಡೆಗಳಿಗೂ ವಿಸ್ತರಣೆಯಾಗಿರುವ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿದೆ.
ಈ ದಾಳಿಕೋರರನ್ನು ಸೆರೆ ಹಿಡಿಯುವಲ್ಲಿ ಸಮಯ ವ್ಯರ್ಥ ಮಾಡದಂತೆ ಅಹ್ಮದಿನೇಜಾದ್ ಅವರು ಪಾಕಿಸ್ತಾನಕ್ಕೆ ಒತ್ತಾಯಿಸಿದ್ದಾರೆ ಎಂದು ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಪಾಕಿಸ್ತಾನವು ಜುಂದೋಲ್ಲಾ ಎಂಬ ಸುನ್ನಿ ಭಯೋತ್ಪಾದನಾ ಸಂಘಟನೆಯ ಸದಸ್ಯರನ್ನು ಪೋಷಿಸುತ್ತಿದೆ ಎಂದು ಈ ಹಿಂದೆಯೇ ಇರಾನ್ ಆರೋಪಿಸಿತ್ತು. ಭಾನುವಾರ 30ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಬಾಂಬ್ ಸ್ಫೋಟ ಪ್ರಕರಣಕ್ಕೆ ತಾನೇ ಹೊಣೆ ಎಂದು ಜುಂದೋಲ್ಲಾ ಹೇಳಿಕೊಂಡಿತ್ತು.
ತಾಲಿಬಾನ್, ಐಎಸ್ಐ ಸೇರಿದಂತೆ ಹಲವಾರು ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಜುಂದೋಲ್ಲಾ, ತನ್ನದೇ ಆದ ಛಾಪು ಮೂಡಿಸಿದೆ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದಲ್ಲಿರುವ ಕೆಲವು ಭದ್ರತಾ ಏಜೆನ್ಸಿಗಳು ಈ ಭಯೋತ್ಪಾದನಾ ಕೃತ್ಯದ ಪ್ರಮುಖರಿಗೆ ಸಹಕರಿಸುತ್ತಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಲಭಿಸಿದೆ. ಈ ಕ್ರಿಮಿನಲ್‌ಗಳನ್ನು ನಮಗೊಪ್ಪಿಸುವಂತೆ ಕೇಳುವುದು ನಮ್ಮ ಹಕ್ಕು ಎಂದು ಭಾವಿಸಿರುವುದಾಗಿ ಅಹ್ಮದಿನೇಜಾದ್ ಹೇಳಿದ್ದಾರೆ.
ಈ ಮಧ್ಯೆ, ಟೆಹ್ರಾನ್‌ನಲ್ಲಿರುವ ಪಾಕ್ ವಿದೇಶಾಂಗ ರಾಯಭಾರಿಯನ್ನು ಇರಾನ್ ವಿದೇಶಾಂಗ ಸಚಿವಾಲಯ ಕರೆಸಿಕೊಂಡಿದ್ದು, ಪಾಕಿಸ್ತಾನದ ಮೂಲಕವೇ ಇರಾನ್ ಮೇಲೆ ದಾಳಿ ನಡೆದಿರುವ ಬಗ್ಗೆ ಸಾಕ್ಷ್ಯಗಳು ದೊರೆತಿರುವುದನ್ನು ಪಾಕಿಸ್ತಾನದ ಅಧಿಕಾರಿಯ ಗಮನಕ್ಕೆ ತರಲಾಗಿದೆ.
ಇದೇ ಸಂದರ್ಭದಲ್ಲಿ ಇರಾನ್ ಗಡಿಯಲ್ಲಿ ಸೂಕ್ತ ಭದ್ರತಾ ಏರ್ಪಾಡು ಮಾಡಲು ಎಲ್ಲ ರೀತಿಯಲ್ಲಿಯೂ ಪ್ರಯತ್ನಿಸುವುದಾಗಿ ಪಾಕ್ ಅಧಿಕಾರಿಯು ಇರಾನಿಗೆ ಭರವಸೆ ನೀಡಿದ್ದಾರೆ.