ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದಕರಿಗೆ 'ಮೋಕ್ಷದ ದಾರಿ' ತೋರಿಸುವ ಪಾಕ್ (Rah-e-Nijat | Afghanistan | Pakistan | Terror | Al Qaida | Waziristan)
Feedback Print Bookmark and Share
 
ಇತರ ರಾಷ್ಟ್ರಗಳಿಗೆ, ವಿಶೇಷವಾಗಿ ಭಾರತದಲ್ಲಿ ಉಗ್ರಗಾಮಿಗಳನ್ನು ಕಳುಹಿಸಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ಇದೀಗ ತಾನೇ ಸಾಕಿ ಸಲಹಿದ ಮಂದಿಯಿಂದ ಕಿರುಕುಳ ಹೆಚ್ಚಾಗುತ್ತಿರುವಂತೆ ತೋರುತ್ತಿದ್ದು, ಪಾಕಿಸ್ತಾನವನ್ನು ಕಬಳಿಸಲು ಪ್ರಯತ್ನಿಸುತ್ತಿರುವ ತಾಲಿಬಾನ್ ಉಗ್ರರನ್ನು ಮಟ್ಟ ಹಾಕಲು ತಾಲಿಬಾನ್ ಪ್ರಧಾನ ನೆಲೆ ವಜೀರಿಸ್ತಾನದಲ್ಲಿ ಪಾಕ್ ಮತ್ತು ಉಗ್ರರ ನಡುವೆ ಕದನ ಮತ್ತಷ್ಟು ಭೀಕರತೆ ಪಡೆದುಕೊಳ್ಳುತ್ತಿದೆ.

ಕಳೆದೆರಡು ವಾರಗಳಲ್ಲಿ ಪಾಕಿಸ್ತಾನದಲ್ಲಿ ಆರು ಪ್ರಮುಖ ದಾಳಿಗಳು ನಡೆದಿದ್ದು, ಇದರಲ್ಲಿ 150ಕ್ಕೂ ಹೆಚ್ಚು ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ಉಗ್ರರನ್ನು ಮಟ್ಟ ಹಾಕಲು ಈ ಕಾರ್ಯಾಚರಣೆ ಆರಂಭಿಸಿತ್ತು.

ಅಮೆರಿಕದ ಪ್ರಮುಖ ಸೇನಾ ಜನರಲ್ ಒಬ್ಬರು ರಾಜಕೀಯ ಮತ್ತು ಸೇನಾ ಮುಖಂಡರೊಂದಿಗೆ ಮಾತುಕತೆ ನಡೆಸಲು ಬರುತ್ತಿರುವ ಹಿನ್ನೆಲೆಯಲ್ಲಿ, ಪಾಕ್ ತಾಲಿಬಾನ್ ಮುಖ್ಯಸ್ಥ (ಮೃತ) ಬೈತುಲ್ಲಾ ಮಹಸೂದ್‌ನ ನೆಲೆ ವಜೀರಿಸ್ತಾನದಲ್ಲಿ ಪಾಕ್ ಕಾರ್ಯಾಚರಣೆ ತೀವ್ರಗೊಂಡಿದೆ. ಈ ಪ್ರದೇಶದಲ್ಲಿ ಅಲ್ ಖಾಯಿದಾ ಉಗ್ರರೂ ಅವಿತುಕೊಂಡಿದ್ದು, ಮಹಸೂದ್ ನೆಲೆಯತ್ತ ಸಮೀಪಿಸುತ್ತಿದ್ದೇವೆ ಎಂದು ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಅತಾರ್ ಅಬ್ಬಾಸ್ ಹೇಳಿದ್ದಾರೆ.

'ರಾಹ್-ಇ-ನಿಜತ್' (ಮೋಕ್ಷದ ದಾರಿ) ಎಂಬ ಸಂಕೇತ ಪದವುಳ್ಳ ಈ ಕಾರ್ಯಾಚರಣೆಯ ಮೂಲಕ ವಜೀರಿಸ್ತಾನದ ಆಗ್ನೇಯ ಮತ್ತು ನೈಋತ್ಯ ಭಾಗದಿಂದ ಒಳ ನುಗ್ಗುತ್ತಿದ್ದೇವೆ ಎಂದು ಅಬ್ಬಾಸ್ ಹೇಳಿದ್ದಾರೆ. ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಕನಿಷ್ಠ 60 ಉಗ್ರರನ್ನು ಕೊಲ್ಲಲಾಗಿದೆ ಎನ್ನುತ್ತಿದೆ ಪಾಕ್.

ಉತ್ತರ ವಜೀರಿಸ್ತಾನದಲ್ಲಿ ಆಫ್ಘಾನಿಸ್ತಾನದ ಗಡಿ ದಾಟಿ ಉಗ್ರರು ತಪ್ಪಿಸಿಕೊಳ್ಳದಂತಾಗಲು ಉತ್ತರದಲ್ಲಿಯೂ ನಾವು ರಸ್ತೆಗೆ ತಡೆ ಮಾಡುತ್ತಿದ್ದೇವೆ ಎಂದವರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯು ವಿದೇಶೀ ಉಗ್ರಗಾಮಿಗಳನ್ನೊಳಗೊಂಡ (ಕಜಕಿಸ್ತಾನ ಮತ್ತು ಅರಬ್ ಉಗ್ರರು) ಅಲ್ ಖಾಯಿದಾ ಹೋರಾಟಗಾರರೊಂದಿಗೆ ಭೀಕರ ಕದನದಲ್ಲಿ ನಿರತವಾಗಿದೆ. ಪಾಕಿಸ್ತಾನ ಸೇನೆಯ ಸುಮಾರು 30 ಸಾವಿರ ಸಿಬ್ಬಂದಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ಈ ಕಾರ್ಯಾಚರಣೆಯು ಸೋಮವಾರ ಮೂರನೇ ದಿನಕ್ಕೆ ಕಾಲಿರಿಸಿದ್ದು, ಇದು ಇನ್ನೂ ಆರೇಳು ವಾರಗಳು ಮುಂದುವರಿಯಬಹುದು ಎಂದು ಅಬ್ಬಾಸ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ