ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ ಉದ್ಧಟತನ: ಕಾಶ್ಮೀರ ಭಾರತದ್ದಲ್ಲವಂತೆ! (Indoa - China | Jammu and Kashmir | India | Border Despute | Arunachal Pradesh)
Feedback Print Bookmark and Share
 
ಅರುಣಾಚಲ ಪ್ರದೇಶದ ಭಾಗ ತನ್ನದು ಎಂದು ಕ್ಯಾತೆ ತೆಗೆಯುತ್ತಿದ್ದ ಚೀನಾ ಇದೀಗ ಭಾರತದ ವಿರುದ್ಧ ಪಾಕಿಸ್ತಾನದ ಸಕಲ ದುಷ್ಕೃತ್ಯಗಳಿಗೆ ನೆರವು ನೀಡುತ್ತಿರುವ ಶಂಕೆಯನ್ನು ಮತ್ತಷ್ಟು ಬಲಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರದ ವಿವಾದಿತ ಪ್ರದೇಶವನ್ನು ಸ್ವತಂತ್ರ ರಾಷ್ಟ್ರ ಎಂದು ಬಿಂಬಿಸತೊಡಗಿದೆ.

ಚೀನಾ ಸರಕಾರ ಆಹ್ವಾನಿಸಿದ ಟಿಬೆಟ್ ಸಂದರ್ಶಕರು, ವಿಶೇಷವಾಗಿ ಪತ್ರಕರ್ತರಿಗೆ ನೀಡಲಾಗಿರುವ ಕರಪತ್ರದಲ್ಲಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ, ಪ್ರತ್ಯೇಕ ರಾಷ್ಟ್ರ ಎಂದು ತೋರಿಸಲಾಗಿದೆ.

1950ರಲ್ಲಿ ಚೀನಾವು ದಾಳಿ ಮಾಡಿ ವಶಪಡಿಸಿಕೊಂಡಿದ್ದ ಟಿಬೆಟ್ ಕುರಿತಾದ 'ಮೂಲ ಮಾಹಿತಿ' ಹೆಸರುಳ್ಳ ಕರಪತ್ರದಲ್ಲಿ, 'ನೇಪಾಳ, ಮ್ಯಾನ್ಮಾರ್ ಮತ್ತು ಕಾಶ್ಮೀರಗಳಿಂದ ಟಿಬೆಟ್ ಆವೃತವಾಗಿದೆ' ಎಂದು ದಾಖಲಿಸಲಾಗಿದೆ.

ಇದರಲ್ಲಿ ಹೆಸರಿಸಲಾಗಿರುವ ಕಾಶ್ಮೀರ ಪ್ರದೇಶ ಹೊರತಾಗಿ ಉಳಿದ ಮೂರು ಕೂಡ ಸಾರ್ವಭೌಮ ರಾಷ್ಟ್ರಗಳೇ. ಚೀನಾ, ಮ್ಯಾನ್ಮಾರ್ ಮತ್ತು ನೇಪಾಳಗಳಲ್ಲಿ ಲಭ್ಯವಿರುವ ನಕಾಶೆಯಲ್ಲಿ ಕೂಡ ಕಾಶ್ಮೀರವಿಲ್ಲದ ಭಾರತವನ್ನೇ ತೋರಿಸಲಾಗಿದೆ.

ಇತ್ತೀಚೆಗಷ್ಟೇ ಚೀನಾವು ಕಾಶ್ಮೀರದಿಂದ ಬಂದವರಿಗೆ ಪ್ರತ್ಯೇಕ ವೀಸಾ ವ್ಯವಸ್ಥೆ ಮಾಡುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಇದಲ್ಲದೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಂಡಸ್ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಪಾಕಿಸ್ತಾನಕ್ಕೆ ಚೀನಾ ಹಣಕಾಸು ಸಹಿತ ಸಾಕಷ್ಟು ನೆರವು ನೀಡುತ್ತಿದೆ.

ಇದಲ್ಲದೆ, ಭಾರತ ಮತ್ತು ನೇಪಾಳ ನಡುವಿನ ಮುಕ್ತ ಗಡಿಯಲ್ಲಿ ಭದ್ರತಾ ಕ್ರಮ ಹೆಚ್ಚಿಸಬೇಕು, ಯಾಕೆಂದರೆ ಟಿಬೆಟನ್ನರು ಅಲ್ಲಿ ಚೀನಾ ವಿರೋಧೀ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಮತ್ತು ಭಾರತದಿಂದ ನೇಪಾಳಕ್ಕೆ ಬರುತ್ತಿದ್ದಾರೆ ಎಂದು ಚೀನಾ ಕಾರಣ ನೀಡುತ್ತಿದೆ.

ಭಾರತದಲ್ಲಿರುವ ಧರ್ಮಶಾಲಾದಲ್ಲಿ ಟಿಬೆಟ್ ಪ್ರತ್ಯೇಕತಾವಾದಿ ಧಾರ್ಮಿಕ ನಾಯಕ ದಲಾಯಿ ಲಾಮ ಅವರ ಸ್ಥಾನವನ್ನು ತೆರವುಗೊಳಿಸಿದರೆ ಮಾತ್ರವೇ ಚೀನಾ-ಭಾರತ ಸಂಬಂಧ ಸುಧಾರಣೆಯಾಗಬಹುದು ಎಂದೂ ಚೀನಾ ಹೇಳುತ್ತಾ ಬಂದಿದೆ. ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ನೀಡಿದ್ದಕ್ಕೆ ಚೀನಾ ಆಕ್ಷೇಪಿಸಿದ್ದು ಇಲ್ಲಿ ಸ್ಮರಣಾರ್ಹ.

ಒಟ್ಟಿನಲ್ಲಿ, ತನಗೆ ಸಮದಂಡಿಯಾಗಿ ವಿಶ್ವದ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ವಿರುದ್ಧ ಕತ್ತಿ ಮಸೆಯುತ್ತಾ, ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲಿಸುತ್ತಿರುವುದು ನೆರೆ ರಾಷ್ಟ್ರಗಳೊಂದಿಗೆ ಶಾಂತಿ ಮಂತ್ರ ಪಠಿಸುತ್ತಾ ಬಂದಿರುವ ಭಾರತಕ್ಕೆ ಪ್ರಬಲ ಸವಾಲಾಗಿ ಪರಿಣಮಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ