ವಾಷಿಂಗ್ಟನ್, ಮಂಗಳವಾರ, 20 ಅಕ್ಟೋಬರ್ 2009( 11:25 IST )
ಭಾರತೀಯ ಅಮೆರಿಕನ್ನರ ಮನೆಗಳಲ್ಲಿರುವ ಅಮೂಲ್ಯವಾದ ಚಿನ್ನಾಭರಣಗಳ ಮೇಲೆ ಅಮೆರಿಕದ ಕಳ್ಳಕಾಕರು ಕಣ್ಣಿರಿಸಿದ್ದಾರೆ. ಚಿನ್ನದ ಬೆಲೆ ಗಗನಕ್ಕೇರಿದ್ದರಿಂದ ಸಾಂಪ್ರದಾಯಿಕ ಎಲೆಕ್ಟ್ರಾನಿಕ್ ವಸ್ತುಗಳ ಬದಲಿಗೆ ಚಿನ್ನದ ದರೋಡೆಗೆ ದರೋಡೆಕೋರರು ಯತ್ನಿಸುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ.
22 ಕ್ಯಾರೆಟ್‌ಗಿಂತ ಹೆಚ್ಚು ಉನ್ನತ ಗುಣಮಟ್ಟದ ಚಿನ್ನಾಭರಣಗಳು ಭಾರತೀಯರ ವಿಶೇಷವಾಗಿ ದಕ್ಷಿಣ ಏಷ್ಯನ್ನರ ಮನೆಗಳಲ್ಲಿರುವುದರಿಂದ ದರೋಡೆಕೋರರು ಇಂತಹ ಮನೆಗಳ ಮೇಲೆ ತಮ್ಮ ಕಾಕದೃಷ್ಟಿ ಬೀರಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.ಭಾರತೀಯ ಮನೆಗಳಲ್ಲಿ ಕಳ್ಳರು ಲೂಟಿ ಮಾಡಿ ಚಿನ್ನಾಭರಣಗಳನ್ನು ಕದ್ದಿರುವ ಅನೇಕ ಪ್ರಕರಣಗಳು ವಾಷಿಂಗ್ಟನ್ ಸುತ್ತಮುತ್ತಲ ನೆರೆಯ ಪ್ರದೇಶಗಳಲ್ಲಿ ವರದಿಯಾಗಿದೆ. ಕಳ್ಳರ ಕಳ್ಳತನದ ವಿಶೇಷತೆಯೇನೆಂದರೆ ಅವರು ಕೇವಲ 22 ಕ್ಯಾರೆಟ್ ಚಿನ್ನವನ್ನು ಮಾತ್ರ ಕದ್ದಿದ್ದು, ಬೆಳ್ಳಿಯ ವಸ್ತುಗಳನ್ನು ಮತ್ತು ಒಳ್ಳೆಯ ಕುಸುರಿಯ ಸಾಂಪ್ರದಾಯಿಕ ಚಿನ್ನಾಭರಣವನ್ನು ಹಾಗೇ ಬಿಟ್ಟಿದ್ದಾರೆ.
ಕಪಾಟುಗಳಲ್ಲಿ ಇಟ್ಟಿದ್ದ ಉಡುಪುಗಳಲ್ಲಿ ಚಿನ್ನದ ಕುಸುರಿಯಿರುವ ಸಾವಿರಾರು ರೂ. ಮೌಲ್ಯದ ಚಿನ್ನದ ಸೀರೆಗಳನ್ನು ಮಾತ್ರ ಕಳ್ಳರು ಆಯ್ದುಕೊಂಡಿದ್ದಾರೆ. ವಿರ್ಜಿನಿಯದ ಲೌಡನ್ ಕೌಂಟಿಯಲ್ಲಿ ಕಳೆದ ಗುರುವಾರ ಇಂತಹ ಕನಿಷ್ಠ 3 ಪ್ರಕರಣಗಳು ಪತ್ತೆಯಾಗಿವೆ. ಫೇರ್‌ಫೆಕ್ಸ್‌ನಲ್ಲಿ ಕೂಡ ಕಳ್ಳರು 6 ಭಾರತೀಯರ ಮನೆಗಳಿಗೆ ನುಗ್ಗಿದ್ದಾರೆ.
ರೆಸ್ಟನ್, ಸೆಂಟ್ರೆವಿಲ್ಲೆ ಮತ್ತು ಫೇರ್ ಔಕ್ಸ್‌ನಲ್ಲಿ ಜನವರಿ ಮತ್ತು ಆಗಸ್ಟ್ ನಡುವೆ ಇನ್ನೂ 16 ಕಳ್ಳತನಗಳು ನಡೆದಿವೆ. ಇತ್ತೀಚೆಗೆ ಮನೆ ದರೋಡೆಗೆ ಒಳಗಾದ ರಮಣ್ ಕುಮಾರ್, ಕಳ್ಳರು ಲಕ್ಷ್ಮಿಯ ಚಿನ್ನದ ವಿಗ್ರಹವನ್ನು ಕದ್ದೊಯ್ದಿದ್ದು, ಲ್ಯಾಪ್‌ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಗೇ ಬಿಟ್ಟಿದ್ದಾರೆ.
ಕಳ್ಳರು ಅತ್ಯಂತ ನಿಖರತೆಯಿಂದ ಕಾರ್ಯಾಚರಿಸುತ್ತಿದ್ದು, ಮನೆಗಳನ್ನು ಆಯ್ದುಕೊಳ್ಳುವುದರಲ್ಲಿ ಮಾತ್ರವಲ್ಲದೇ ಕಳ್ಳತನದ ವಸ್ತುಗಳನ್ನು ಆಯ್ಕೆ ಮಾಡುವುದರಲ್ಲೂ ನಿಖರತೆ ತೋರಿದ್ದಾರೆ. ವಿಂಧ್ಯ ಕೊಮಿನೇನಿ ತಮ್ಮ ಮದುವೆ ಸಂದರ್ಭದ ದುಬಾರಿ ಸೀರೆಗಳನ್ನು, ವಿವಾಹದ ಉಂಗುರಗಳನ್ನು ಮತ್ತು ಡಿನ್ನರ್ ಸೆಟ್ ಕಳೆದುಕೊಂಡಿದ್ದಾರೆ.