ಇಸ್ಲಾಮಾಬಾದ್, ಮಂಗಳವಾರ, 20 ಅಕ್ಟೋಬರ್ 2009( 15:42 IST )
ಪಾಕಿಸ್ತಾನದ ಇಸ್ಲಾಮಿಕ್ ವಿಶ್ವವಿದ್ಯಾಲಯದ ಶರಿಯ ಬ್ಲಾಕ್‌ನಲ್ಲಿ ಒಂದರ ಹಿಂದೊಂದು ಎರಡು ಸ್ಫೋಟಗಳು ಸಂಭವಿಸಿದ್ದು, ಸುಮಾರು 15 ಜನರು ಮೃತಪಟ್ಟಿದ್ದಾರೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚಿನ ಅಧಿಕೃತ ವರದಿಗಳು ತಿಳಿಸಿರುವ ಪ್ರಕಾರ,4 ವಿದ್ಯಾರ್ಥಿಗಳು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ.
ವಿದ್ಯಾರ್ಥಿನಿಯರ ಕ್ಯಾಂಟೀನ್‌ನಲ್ಲಿ ಒಂದು ಸ್ಫೋಟ ಸಂಭವಿಸಿದ್ದು, ಇನ್ನೊಂದು ಸ್ಫೋಟವು ವಿದ್ಯಾರ್ಥಿಗಳ ವಸತಿನಿಲಯದಲ್ಲಿ ಸಂಭವಿಸಿದೆ. ಸ್ಫೋಟದಲ್ಲಿ ಅನೇಕ ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಮೃತಪಟ್ಟವರಲ್ಲಿ ವಿದೇಶಿ ವ್ಯಕ್ತಿಯೊಬ್ಬರು ಕೂಡ ಸೇರಿದ್ದಾರೆ. ಎರಡು ಸ್ಫೋಟದ ಸ್ಥಳಗಳು ಕೇವಲ 500 ಮೀಟರ್ ಅಂತರದಲ್ಲಿವೆಯೆಂದು ವರದಿಯಾಗಿದೆ.
ಆತ್ಮಾಹುತಿ ದಾಳಿಕೋರನೊಬ್ಬ ಭದ್ರತಾ ಸಿಬ್ಬಂದಿಯೊಬ್ಬನಿಗೆ ಸುಳ್ಳು ಹೇಳಿ ಕ್ಯಾಂಪಸ್‌ನೊಳಕ್ಕೆ ನುಸುಳಿದ ಬಳಿಕ ಸ್ವತಃ ಸ್ಫೋಟಿಸಿಕೊಂಡನೆಂದು ತಿಳಿದುಬಂದಿದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ಪಾಕ್ ಸೇನಾ ಶಿಬಿರದ ಮೇಲೆ ದಾಳಿ ಮತ್ತು ಪೇಶಾವರದಲ್ಲಿ ಕಾರ್ ಬಾಂಬ್ ಸ್ಫೋಟಗಳಲ್ಲಿ ರಕ್ತಪಾತ ಹರಿಸಿದ ತಾಲಿಬಾನ್ ಮೇಲೆ ಪಾಕಿಸ್ತಾನ ತೀವ್ರ ಕಾರ್ಯಾಚರಣೆ ನಡೆಸಿದ್ದು, ವಜಿರಿಸ್ತಾನಲ್ಲಿ 40ಕ್ಕೂ ತಾಲಿಬಾನಿಗಳನ್ನು ಗುಂಡಿನ ದಾಳಿಗೆ ಬಲಿತೆಗೆದುಕೊಂಡಿದೆ.
ತಾಲಿಬಾನ್ ದಾಳಿಗಳ ಹಿನ್ನೆಲೆಯಲ್ಲಿ ಎಲ್ಲ ಕಚೇರಿಗಳಲ್ಲಿ ಪಾಕಿಸ್ತಾನ ಬಿಗಿ ಭದ್ರತೆ ಏರ್ಪಡಿಸಿದ್ದರೂ ಅದನ್ನು ಭೇದಿಸಿ ತಾಲಿಬಾನ್ ದಾಳಿ ನಡೆಸುತ್ತಿರುವುದು ಭದ್ರತೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ.