ವಾಷಿಂಗ್ಟನ್, ಮಂಗಳವಾರ, 20 ಅಕ್ಟೋಬರ್ 2009( 17:38 IST )
ಆಫ್ಘಾನಿಸ್ತಾನದಲ್ಲಿ ಭಾರತ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳಿಂದ ಪಾಕಿಸ್ತಾನದ ಭದ್ರತೆಗೆ ಬೆದರಿಕೆಯೆಂಬ ಪಾಕಿಸ್ತಾನದ ಆರೋಪಗಳನ್ನು ಒಬಾಮಾ ಆಡಳಿತ ಅಲ್ಲಗಳೆದಿದೆ. ಸ್ಥಿರವಾದ ಮತ್ತು ಸಮೃದ್ಧಿಭರಿತ ಆಫ್ಘಾನಿಸ್ತಾನ ಮಾತ್ರ ಪ್ರಾದೇಶಿಕ ಸ್ಥಿರತೆಗೆ ಕೊಡುಗೆ ನೀಡುತ್ತದೆಂದು ನುಡಿದಿದೆ.
ಆಫ್ಘಾನಿಸ್ತಾನದ ಆರ್ಥಿಕತೆ ಮತ್ತು ಮೂಲಸೌಲಭ್ಯ ವೃದ್ಧಿಗೆ ನೆರವು ನೀಡುವುದರಿಂದ ವಲಯದ ಬೇರಾವುದೇ ರಾಷ್ಟ್ರಕ್ಕೆ ಭದ್ರತಾ ಬೆದರಿಕೆಯೆಂದು ಪರಿಗಣಿಸುವುದು ಹೇಗೆಂದು ವಿದೇಶಾಂಗ ಇಲಾಖೆಯ ವಕ್ತಾರ ಐಯಾನ್ ಕೆಲ್ಲಿ ವರದಿಗಾರರ ಜತೆ ಮಾತನಾಡುತ್ತಾ ಪ್ರಶ್ನಿಸಿದ್ದಾರೆ.
ಭಾರತ ಆಫ್ಘಾನಿಸ್ತಾನದಲ್ಲಿ ಕೈಗೊಂಡ ಭಾರೀ ಅಭಿವೃದ್ಧಿ ಯೋಜನೆಗಳಿಂದ ಪಾಕಿಸ್ತಾನಕ್ಕೆ ಭದ್ರತಾ ಬೆದರಿಕೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಕೆಲ್ಲಿ ಮೇಲಿನಂತೆ ಉತ್ತರಿಸಿದರು.
ತಾಲಿಬಾನ್ ಆಡಳಿತದ ಬಳಿಕದ ಆಫ್ಘಾನಿಸ್ತಾನಕ್ಕೆ ಭಾರತ ದೊಡ್ಡ ದಾನಿಯಾಗಿದ್ದು, ಆಫ್ಘಾನಿಸ್ತಾನದಲ್ಲಿ ಕೈಗೊಂಡ ಭಾರೀ ಅಭಿವೃದ್ಧಿ ಯೋಜನೆಗಳಲ್ಲಿ ಭಾರತ ಭಾಗಿಯಾಗಿರುವುದಲ್ಲದೇ, 1.3 ದಶಕೋಟಿ ಅಮೆರಿಕ ಡಾಲರ್ ಮೊತ್ತದ ನೆರವನ್ನು ಭಾರತ ನೀಡಿದೆ.
ನಾವು ಎಲ್ಲವನ್ನೂ ಪೂರ್ಣ ಪಾದದರ್ಶಕತೆಯಲ್ಲಿ ಮಾಡುತ್ತಿದ್ದು, ಆಫ್ಘಾನಿಸ್ತಾನದ ಪುನರ್ನಿಮಾಣಕ್ಕೆ ಕೊಡುಗೆ ನೀಡುವ ಯಾವುದೇ ರಾಷ್ಟ್ರವು ಸಹಕಾರದ ರೀತಿಯಲ್ಲಿ ಮಾಡುತ್ತಿದ್ದು, ನಾವು ಸಾಧ್ಯವಾದಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇವೆಂದು ಕೆಲ್ಲಿ ಹೇಳಿದ್ದಾರೆ.