ಇಸ್ಲಾಮಾಬಾದ್, ಬುಧವಾರ, 21 ಅಕ್ಟೋಬರ್ 2009( 13:24 IST )
ಇಸ್ಲಾಮಿಕ್ ವಿಶ್ವವಿದ್ಯಾಲಯದ ಮೇಲೆ ಆತ್ಮಾಹುತಿ ಬಾಂಬರ್‌ಗಳು ದಾಳಿ ಮಾಡಿದ ಬಳಿಕ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಅನಿರ್ದಿಷ್ಟಾವಧಿವರೆಗೆ ಮುಚ್ಚಲು ಅಧಿಕಾರಿಗಳು ಆದೇಶ ನೀಡಿದ್ದಾರೆ. ಪಾಕಿಸ್ತಾನದ ಅತ್ಯಂತ ಜನನಿಬಿಡ ಪ್ರಾಂತ್ಯವಾದ ಪಂಜಾಬ್, ಎಲ್ಲ ರಾಜ್ಯಸ್ವಾಮ್ಯದ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನಿರ್ದಿಷ್ಟಾವಧಿ ಮುಚ್ಚಲು ಆದೇಶಿಸಿದೆ.
ಇಸ್ಲಾಮಾಬಾದ್ ಇಸ್ಲಾಮಿಕ್ ವಿವಿಯಲ್ಲಿ ಆತ್ಮಾಹುತಿ ಬಾಂಬ್ ಸಂಭವಿಸಿದ ಕೂಡಲೇ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಂಜಾಬ್ ಕಾನೂನು ಸಚಿವ ರಾಣಾ ಸನಾವುಲ್ಲಾ, ಪೊಲೀಸ್ ಮುಖ್ಯಸ್ಥ ತಾರಿಖ್ ಸಲೀಂ ದೋಗಾರ್ ಮತ್ತು ಲಾಹೋರ್ ಆಯುಕ್ತ ಖುಸ್ರೊ ಪರ್ವೇಜ್ ಸಭೆಯಲ್ಲಿ ಭಾಗವಹಿಸಿದ್ದು, ಪ್ರಾಂತ್ಯವಿಡೀ ಶಿಕ್ಷಣ ಸಂಸ್ಥೆಗಳಲ್ಲಿ ಭದ್ರತಾ ಪರಿಸ್ಥಿತಿ ಕುರಿತು ಪರಮಾರ್ಶೆ ನಡೆಸಿದ್ದಾರೆ.
ಆದೇಶವನ್ನು ಪಾಲಿಸದ ಯಾವುದೇ ಸಂಸ್ಥೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.