ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11 ವಿಚಾರಣೆ ಒಲ್ಲೆಯೆಂದು ಕೈಚೆಲ್ಲಿ ಕುಳಿತ ಜಡ್ಜ್ (Lahore | Mumbai | Terrorist | Lakhvi)
Feedback Print Bookmark and Share
 
ಮುಂಬೈ ಭಯೋತ್ಪಾದನೆ ದಾಳಿಗಳ ಆರೋಪದ ಮೇಲೆ ಬಂಧಿತರಾದ ಏಳು ಮಂದಿ ಶಂಕಿತರ ವಿರುದ್ಧದ ಆರೋಪಗಳ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ನ್ಯಾಯಾಧೀಶರೊಬ್ಬರು ವಿಚಾರಣೆ ನಡೆಸಲು ತಮ್ಮ ಕೈಯಲ್ಲಿ ಸಾಧ್ಯವಿಲ್ಲವೆಂದು ಕೈಚೆಲ್ಲಿ ಕುಳಿತಿದ್ದಾರೆ.

ಬಿಗಿ ಭದ್ರತೆಯ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ವಿಚಾರಣೆ ನಡೆಸುತ್ತಿರುವ ಭಯೋತ್ಪಾದನೆ ನಿಗ್ರಹ ಕೋರ್ಟ್ ನ್ಯಾಯಾಧೀಶ ಬಾಖಿರ್ ಅಲಿ ರಾಣಾ, ಕೆಲವು ಅನಿವಾರ್ಯ ಕಾರಣಗಳಿಗಾಗಿ, ವಿಚಾರಣೆ ನಡೆಸುವುದರಿಂದ ವಿನಾಯಿತಿ ನೀಡಬೇಕೆಂದು ಲಾಹೋರ್ ಹೈಕೋರ್ಟ್‌ಗೆ ಕೋರಿಕೆ ಸಲ್ಲಿಸಿದ್ದಾರೆ.ಲಾಹೋರ್ ಹೈಕೋರ್ಟ್ ಮುಖ್ಯನ್ಯಾಯಮ‌ೂರ್ತಿಗೆ ಈ ಕುರಿತು ರಾಣಾ ಔಪಚಾರಿಕ ಮನವಿ ಮಾಡಿದ್ದಾರೆ.

ಲಷ್ಕರೆ ತೊಯ್ಬಾದ ಜಾಕಿರ್ ರೆಹ್ಮಾನ್ ಲಖ್ವಿ ಮತ್ತು ಜರಾರ್ ಶಾ ಸೇರಿದಂತೆ 7 ಮಂದಿ ಶಂಕಿತರ ವಿಚಾರಣೆಗೆ ಸಂಬಂಧಪಟ್ಟಂತೆ ಸರ್ಕಾರ ಮತ್ತಿತರ ಭಾಗಗಳಿಂದ ಒತ್ತಡದ ಅನುಭವ ಉಂಟಾದ್ದರಿಂದ ತಾವು ವಿಚಾರಣೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾಗಿ ಮ‌ೂಲಗಳು ಹೇಳಿವೆ.

ವಿಚಾರಣೆಯು ರಹಸ್ಯವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅತೃಪ್ತರಾದ 7 ಮಂದಿ ಶಂಕಿತರ ವಕೀಲರಿಂದ ಕೂಡ ರಾಣಾ ಒತ್ತಡ ಎದುರಿಸುತ್ತಿರುವುದಾಗಿ ಮ‌ೂಲಗಳು ಹೇಳಿವೆ.ಅ.10ರಂದು ನಡೆದ ವಿಚಾರಣೆಗೆ ಹೊಂದಿಕೆಯಾಗುವಂತೆ ರಾವಲ್ಪಿಂಡಿಯಲ್ಲಿ ಸೇನಾ ಮುಖ್ಯಕಚೇರಿ ಮೇಲೆ ದಾಳಿ ನಡೆಯಿತು. ಕೋರ್ಟ್ ಹೊರಗೆ ಅನಿಶ್ಚಿತ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಆವರಣದಿಂದ ಹೊರಕ್ಕೆ ಹೋಗಬಯಸುವವರು ಹೋಗಬಹುದು ಎಂದು ರಾಣಾ ತಿಳಿಸಿದ್ದರು.

ವಕೀಲರು ಕೋರ್ಟ್‌ರೂಂನಿಂದ ಹೊರಕ್ಕೆ ತೆರಳಿದ ಕೂಡಲೇ, ಶಂಕಿತರ ವಿರುದ್ಧ ನ್ಯಾಯಾಧೀಶರು ಆರೋಪ ಹೊರಿಸಿ ತಪ್ಪಿತಸ್ಥರನ್ನಾಗಿ ಮಾಡಿದ್ದರು. ಕೋರ್ಟ್ ಕ್ರಮದ ವಿರುದ್ದ ಪ್ರತಿಭಟಿಸಿ ವಕೀಲರು ತರುವಾಯದ ಅ.17ರ ವಿಚಾರಣೆಗೆ ಬಹಿಷ್ಕಾರ ಹಾಕಿದ್ದರು.

ರಹಸ್ಯ ವಿಚಾರಣೆ ನಡೆಸಬೇಕೆಂಬ ಕ್ರಮದಿಂದ ತಮ್ಮ ಸ್ಥಿತಿ ದುರ್ಬಲವಾಗಿದೆಯೆಂದು ನ್ಯಾಯಾಧೀಶರು ತಿಳಿಸಿದ್ದಾರೆ. ಅ.10ರಂದು ವಕೀಲರ ಗೈರುಹಾಜರಿಯಲ್ಲೇ ಶಂಕಿತರ ಮೇಲೆ ಆರೋಪ ಹೊರಿಸಿ ತಪ್ಪಿತಸ್ಥರೆಂದು ತೀರ್ಮಾನಿಸಿದ ಬಳಿಕ ಲಷ್ಕರೆ ತೊಯ್ಬಾದಿಂದ ಬೆದರಿಕೆಗಳನ್ನು ರಾಣಾ ಸ್ವೀಕರಿಸಿದ್ದಾರೆಂದು ವರದಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ