ರೋಗಗುರುತಿಸುವಿಕೆಯಲ್ಲಿ ಸರಣಿ ತಪ್ಪುಗಳ ಫಲವಾಗಿ 26ರ ಪ್ರಾಯದ ಬ್ರಿಟನ್ ಪೌರನೊಬ್ಬ ಸಾವಪ್ಪಿದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರಿಗೆ ಬ್ರಿಟನ್‌ನಲ್ಲಿ ವೃತ್ತಿ ಮಾಡದಂತೆ ನಿಷೇಧಿಸುವ ಸಂಭವವಿದೆ.ಪಾಟ್ನಾ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದಿದ್ದ ವೈದ್ಯ ನವೀನ್ ಶಂಕರ್ ವಿರುದ್ಧ ವೃತ್ತಿಯ ಅರ್ಹತೆ ಕುರಿತ ವಿಚಾರಣೆಯನ್ನು ಜನರಲ್ ವೈದ್ಯ ಮಂಡಳಿ ಆರಂಭಿಸಿದೆ.
ನಿಕ್ಕಿ ಸ್ಯಾಮ್ಸ್ ಎಂಬ ಮಹಿಳೆ ನಾಲ್ಕು ವರ್ಷಗಳಲ್ಲಿ ವೈದ್ಯರನ್ನು ಸುಮಾರು 8 ಬಾರಿ ಭೇಟಿ ಮಾಡಿದ ಬಳಿಕವೂ ಅವರಲ್ಲಿದ್ದ ಗರ್ಭಕೊರಳಿನ ಕ್ಯಾನ್ಸರ್ ಲಕ್ಷಣಗಳನ್ನು ಗುರುತಿಸಲು 59ರ ಪ್ರಾಯದ ಶಂಕರ್ ವಿಫಲರಾಗಿದ್ದರು. ಹೊಟ್ಟೆ ನೋವು ಮತ್ತು ರಕ್ತಸ್ರಾವದ ಬಗ್ಗೆ ಪದೇ ಪದೇ ದೂರು ನೀಡಿದ್ದರೂ, ದೇಹದ ಪರೀಕ್ಷೆ ನಡೆಸದೇ ಅಷ್ಟೊಂದು ಗಂಭೀರವಲ್ಲವೆಂದು ಹೇಳಿದ್ದರು.
ಬೇರೊಬ್ಬ ವೈದ್ಯರನ್ನು ಸಂಪರ್ಕಿಸಿದಾಗಲೇ ಅವರಿಗೆ ಕ್ಯಾನ್ಸರ್ ಲಕ್ಷಣಗಳು ಪತ್ತೆಯಾಯಿತು. ಮಗುವೊಂದರ ಚಿಕಿತ್ಸೆಗೆ ಸಂಬಂಧಿಸಿದಂತೆ ದುರ್ನಡತೆ ತೋರಿದ್ದರಿಂದ ಶಂಕರ್ ಅವರನ್ನು ಈ ಮುಂಚೆ ಅಮಾನತು ಮಾಡಲಾಗಿತ್ತು. ಸ್ಯಾಮ್ಸ್ ಅವರ ರೋಗಲಕ್ಷಣ ಪತ್ತೆಯಾದ ಬಳಿಕ ರೇಡಿಯೊಥೆರಪಿ ಮತ್ತು ಕೆಮೊಥೆರಪಿ ಚಿಕಿತ್ಸೆ ನೀಡಲಾಯಿತಾದರೂ, ಒಂದು ವರ್ಷದ ಬಳಿಕ ಅವರು ಮೃತಪಟ್ಟಿದ್ದರು.