ಇಸ್ಲಾಮಾಬಾದ್, ಗುರುವಾರ, 22 ಅಕ್ಟೋಬರ್ 2009( 15:35 IST )
ಮೋಟರ್‌ಬೈಕ್‌ನಲ್ಲಿ ಆಗಮಿಸಿದ ಅವಳಿ ಬಂದೂಕುಧಾರಿಗಳು ಸೈನಿಕನೊಬ್ಬನನ್ನು ಮತ್ತು ಉನ್ನತ ದರ್ಜೆಯ ಸೇನಾಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿ ಗುರುವಾರ ಬೆಳಿಗ್ಗೆ ಹತ್ಯೆಮಾಡಿದ್ದಾರೆ. ಕಳೆದ ಮೂರು ವಾರಗಳಲ್ಲಿ ಪಾಕಿಸ್ತಾನದಲ್ಲಿ ಸುಮಾರು 170ಕ್ಕೂ ಹೆಚ್ಚು ಮಂದಿಯನ್ನು ಹತ್ಯೆಮಾಡಿ ರಕ್ತದೋಕುಳಿ ಹರಿಸಿದ ಬಳಿಕ ಈ ದಾಳಿ ನಡೆದಿದೆ.
ತಾಲಿಬಾನಿಗಳ ಅಟ್ಟಹಾಸದ ವಿರುದ್ಧ ತಿರುಗಿಬಿದ್ದ ಮಿಲಿಟರಿ ದಕ್ಷಿಣ ವಾಜಿರಿಸ್ತಾನದಲ್ಲಿ ಬುಡಕಟ್ಟು ಪ್ರದೇಶದಲ್ಲಿ ಭೂಕಾರ್ಯಾಚರಣೆ ನಡೆಸುತ್ತಿದೆ. ವಸತಿ ಪ್ರದೇಶದಲ್ಲಿ ಸೇನಾ ಜೀಪೊಂದರ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಸೈನಿಕ ಮತ್ತು ಉನ್ನತ ಸೇನಾಧಿಕಾರಿ ಬ್ರಿಗೇಡಿಯರ್ ಸತ್ತಿದ್ದು, ಕಾರನ್ನು ನಡೆಸುತ್ತಿದ್ದ ಸೈನಿಕ ಗಾಯಗೊಂಡಿದ್ದಾನೆಂದು ಆಸ್ಪತ್ರೆ ಅಧಿಕಾರಿ ವಾಸೀಂ ಕ್ವಾಜಾ ತಿಳಿಸಿದರು. ಖಾಸಗಿ ಎಕ್ಸ್‌ಪ್ರೆಸ್ ಟಿವಿ ಚಾನೆಲ್‌ನ ಚಿತ್ರದಲ್ಲಿ ಹಸಿರು ಜೀಪಿನ ವಿಂಡ್‌ಶೀಲ್ಡ್ ಮೇಲೆ ಗುಂಡಿನ ರಂಧ್ರಗಳು ಉಂಟಾಗಿದ್ದನ್ನು ತೋರಿಸಿವೆ.
ಅಲ್ ಖಾಯಿದಾ ಮುಖಂಡ ಒಸಾಮಾ ಬಿನ್ ಲಾಡೆನ್ ಅಡಗುತಾಣವಾಗಿ ಮಾಡಿಕೊಂಡಿದ್ದಾನೆಂಬ ವದಂತಿಯಿರುವ ದಕ್ಷಿಣ ವಾಜಿರಿಸ್ತಾನದಲ್ಲಿ ಮಿಲಿಟರಿ ಹಲವಾರು ಕಡೆಗಳಿಂದ ಮುನ್ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಮಿಲಿಟರಿ ಪಾಕಿಸ್ತಾನ ತಾಲಿಬಾನ್ ಮುಖಂಡ ಹಕೀಮುಲ್ಲಾ ಮೆಹ್ಸೂದ್ ತವರುಪಟ್ಟಣದ ಕೈವಶಕ್ಕೆ ಹೋರಾಟ ನಡೆಸಿದೆ. ಸರಾರೋಘಾ ಮಿಲಿಟರಿ ನೆಲೆಯ ದಾರಿಯಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಕೋಟ್ಕಾಯ್‌ಗಾಗಿ ಹೋರಾಟ ಮಿಲಿಟರಿಗೆ ಅತ್ಯಂತ ಮುಖ್ಯವಾಗಿದೆ.