ಇಸ್ತಾನ್‌ಬುಲ್‌ನಿಂದ ಕೈರೊಗೆ ತೆರಳುತ್ತಿದ್ದ ಈಜಿಪ್ಟಿನ ವಿಮಾನವನ್ನು ಅಪಹರಿಸಿ ಜೆರುಸಲೇಂ ಕಡೆಗೆ ಒಯ್ಯಲು ಪ್ರಯತ್ನಿಸಿದ ಸೂಡಾನ್ ಪ್ರಯಾಣಿಕನೊಬ್ಬನ ಯತ್ನವನ್ನು ಏರ್ ಮಾರ್ಷಲ್‌ಗಳು ವಿಫಲಗೊಳಿಸಿದ ಘಟನೆ ನಡೆದಿದೆ.
ಬುಧವಾರ ವಿಮಾನ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಪ್ರಥಮ ದರ್ಜೆ ಪ್ರಯಾಣಿಕರಿಗೆ ಊಟದ ಜತೆ ಒದಗಿಸುವ ಚೂರಿಯನ್ನೇ ಆಯುಧವಾಗಿ ಬಳಸಿದ ಪ್ರಯಾಣಿಕ ವಿಮಾನದ ಸಿಬ್ಬಂದಿಗೆ ಚೂರಿಹಿಡಿದು ಬೆದರಿಕೆ ಹಾಕಿದಾಗ ವಿಮಾನದಲ್ಲಿ ಕೆಲವು ಕ್ಷಣಗಳವರೆಗೆ ಭಯಭೀತ ವಾತಾವರಣ ಉಂಟಾಯಿತೆಂದು ಈಜಿಪ್ಟ್ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾನಮತ್ತನಾಗಿದ್ದ ಪ್ರಯಾಣಿಕ ಜೆರುಸಲೇಂಗೆ ಸ್ವಾತಂತ್ರ್ಯವನ್ನು ಬಯಸಿ ವಿಮಾನ ಅಪಹರಣಕ್ಕೆ ಯತ್ನಿಸಿದ್ದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಆದರೆ ಮಾರ್ಷಲ್‌ಗಳು ಅವನನ್ನು ಹಿಡಿಯಲು ಯಶಸ್ವಿಯಾದ ಬಳಿಕ 87 ಪ್ರಯಾಣಿಕರಿದ್ದ ವಿಮಾನ ನಿರಾತಂಕವಾಗಿ ಪ್ರಯಾಣ ಮುಂದುವರಿಸಿತು.