ಇಸ್ಲಾಮಾಬಾದ್, ಭಾನುವಾರ, 25 ಅಕ್ಟೋಬರ್ 2009( 15:48 IST )
ಅಫ್ಘಾನಿಸ್ತಾನಕ್ಕೆ ಹೊಂದಿಕೊಂಡಿರುವ ತಾಲಿಬಾನ್ ಪ್ರಾಬಲ್ಯದ ದಕ್ಷಿಣ ವಜಿರಿಸ್ತಾನದಲ್ಲಿ ಭಾರೀ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಇನ್ನು ಒಂದು ತಿಂಗಳೊಳಗೆ ಉಗ್ರಗಾಮಿಗಳನ್ನು ಹೊರಗಟ್ಟಲಾಗುವುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಚೌಧರಿ ಅಹ್ಮದ್ ಮುಖ್ತರ್ ತಿಳಿಸಿದ್ದಾರೆ.
ಯಾವುದೇ ಬೆಲೆ ತೆತ್ತದಾದರೂ ದೇಶದ ಸೈನಿಕ ಪಡೆ ಉಗ್ರಗಾಮಿ ಪಡೆಗಳನ್ನು ಸೋಲಿಸಿ, ಅವರನ್ನು ಸಂಪೂರ್ಣವಾಗಿ ಹೊರಗಟ್ಟಲಾಗುವುದು ಎಂದು ಅವರು ದಿ ಸಂಡೆ ಟೈಮ್ಸ್ ಜೊತೆ ಮಾತನಾಡುತ್ತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ನಿರ್ನಾಮವಾಗುವ ತನಕ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದ ಚೌಧರಿ, ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಿಂದ ಈಗಾಗಲೇ 1.2ಲಕ್ಷ ಜನರನ್ನು ಡೇರಾ ಇಸ್ಲಾಮಿಕ್ ಖಾನಕ್ಕೆ ಸ್ಥಳಾಂತರಿಸಲಾಗಿದೆ. ಪಡಿತರ ಹಾಗೂ ಪರಿಹಾರ ಸಾಮಗ್ರಿ ಸೇರಿದಂತೆ ಪ್ರತಿ ತಿಂಗಳು 5ಸಾವಿರ ಹಣವನ್ನು ಇವರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪಾಕಿಸ್ತಾನ ಸೇನೆಯು ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ತಾಲಿಬಾನ್ ವರಿಷ್ಠ ಹಕೀಂಮುಲ್ಲಾ ಮೆಹ್ಸೂದ್‌ನ ವಾಸಸ್ಥಾನ ಕೋಟ್‌ಕೈ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿದೆ.